ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಮೊದಲೇ ತೀರ್ಮಾನಿಸಿದಂತೆ ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ್ದಾರೆ. ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ನೀಡಿದ ಅಭಯವೇನು? ಇಲ್ಲಿದೆ ವಿವರ.
ಕಾಂತಾರ ಚಾಪ್ಟರ್ 1 ರಲ್ಲಿ ದೈವದ ಸನ್ನಿವೇಶಗಳಿವೆ. ಹೀಗಾಗಿ ರಿಷಬ್ ಶೆಟ್ಟಿ ಸಾಕಷ್ಟು ರಿಸ್ಕ್ ತೆಗೆದುಕೊಂಡು ಸಿನಿಮಾ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಬಳಿಕವೂ ದೈವಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಅವರ ಮೇಲೆ ಕೆಲವರು ತಿರುಗಿಬಿದ್ದಿದ್ದರು.
ಇದೀಗ ಸಿನಿಮಾ ಯಾವುದೇ ತೊಂದರೆಯಿಲ್ಲದೇ ಯಶಸ್ವೀ ಪ್ರದರ್ಶನ ಪಡೆದ ಹಿನ್ನಲೆಯಲ್ಲಿ ರಿಷಬ್ ಶೆಟ್ಟಿ ಪಂಜುರ್ಲಿ ದೈವಕ್ಕೆ ಹರಕೆ ನೇಮ ಕೊಟ್ಟಿದ್ದಾರೆ. ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೇವಸ್ಥಾನದಲ್ಲಿ ಹರಕೆ ನೇಮ ನಡೆಯಿತು.
ಈ ವೇಳೆ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ ಮತ್ತು ಕುಟುಂಬಸ್ಥರು, ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಉಪಸ್ಥಿತರಿದ್ದರು. ರಿಷಬ್ ಶೆಟ್ಟಿಯನ್ನು ಅಪ್ಪಿ ಅಭಯ ನೀಡಿದ ದೈವ ನಿನ್ನ ಜೊತೆಗೆ ನಾನಿದ್ದೇನೆ ಎಂದಿದೆ. ಕಾಂತಾರ ಬಿಡುಗಡೆಗೆ ಮುನ್ನವೂ ಇದೇ ದೈವಸ್ಥಾನದಲ್ಲಿ ರಿಷಬ್ ಮತ್ತು ತಂಡ ನೇಮ ನೀಡಿತ್ತು. ಇದೀಗ ಕಾಂತಾರ ಚಾಪ್ಟರ್ 1 ಬಿಡುಗಡೆ ಬಳಿಕವೂ ನೇಮ ನೀಡಿ ಹರಕೆ ತೀರಿಸಿದ್ದಾರೆ.