ಮುಂಬೈ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಹೊಗಳುವ ಭರದಲ್ಲಿ ದೈವಕ್ಕೆ ಅವಮಾನ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ಗೋವಾದಲ್ಲಿ ಫಿಲಂಸ್ ಫೆಸ್ಟಿವಲ್ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಎದುರು ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಮಾತನಾಡಿದ್ದ ರಣವೀರ್ ಸಿಂಗ್ ಚಾಮುಂಡಿ ದೈವವನ್ನು ಹೆಣ್ಣು ದೆವ್ವ ಎಂದಿದ್ದರು. ಅದೂ ಸಾಲದೆಂಬಂತೆ ಕಾಂತಾರ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ದೈವದ ಸನ್ನಿವೇಶವನ್ನು ಅನುಕರಿಸಲು ಹೋಗಿ ಅಪಹಾಸ್ಯ ಮಾಡಿದ್ದರು.
ಇದರ ವಿರುದ್ಧ ತುಳುನಾಡಿನ ದೈವಾರಾಧಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಲವರು ಸೋಷಿಯಲ್ ಮೀಡಿಯಾದಲ್ಲಿ ಇದು ಹಿಂದೂ ನಂಬಿಕೆಗೆ ಮಾಡಿದ ಅವಹೇಳನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ರಣವೀರ್ ಸಿನಿಮಾಗಳನ್ನು ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಇನ್ನು, ಹಿಂದೂ ಜಾಗರಣ ವೇದಿಕೆ ರಣವೀರ್ ವಿರುದ್ಧ ದೂರು ಕೂಡಾ ನೀಡಿತ್ತು.
ಇದರ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ರಣವೀರ್ ಸಿಂಗ್ ಕ್ಷಮೆ ಯಾಚಿಸಿದ್ದಾರೆ. ಕಾಂತಾರ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಎಷ್ಟು ಅದ್ಭುತವಾಗಿ ನಟಿಸಿದ್ದರು ಎಂದು ಹೇಳುವುದು ನನ್ನ ಉದ್ದೇಶವಾಗಿತ್ತಷ್ಟೇ. ದೇಶದ ಎಲ್ಲಾ ಭಾಗದ ಸಂಸ್ಕೃತಿ, ಸಂಪ್ರದಾಯಗಳನ್ನು ನಾನು ಗೌರವಿಸುತ್ತೇನೆ. ಹಾಗಿದ್ದರೂ ನನ್ನ ವರ್ತನೆಯಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.