ಬೆಂಗಳೂರು: ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ ಕಾಂತಾರ ಚಾಪ್ಟರ್ 1 ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಬಾಕ್‌ಆಫೀಸ್‌ನಲ್ಲಿ ₹ 832.42 ಕೋಟಿಗೂ ಹೆಚ್ಚಿನ ಆದಾಯ ಗಳಿಸಿ ದಾಖಲೆ ಬರೆದ ಚಿತ್ರದ ಯಶಸ್ಸನ್ನು ಚಿತ್ರ ತಂಡ ಭರ್ಜರಿಯಾಗಿ ಆಚರಿಸಿಕೊಂಡಿದೆ.
ಬೆಂಗಳೂರಿನ ಹೈ ಅಲ್ಟ್ರಾ ನಲ್ಲಿ ಶನಿವಾರ ಕಾಂತರ ಚಾಪ್ಟರ್ 1 ಚಿತ್ರದ ಗೆಲುವಿನ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಚಿತ್ರ ತಂಡದೊಂದಿಗೆ ನಟ ರಿಷಭ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಾಗಂದೂರ್, ನಟಿ ರುಕ್ಮಿಣಿ ವಸಂತ್, ನಟರಾದ ಗುಲ್ಶನ್ ದೇವಯ್ಯ ಅವರು ಭಾರಿ ಗಾತ್ರದ ಕೇಕ್ ಕತ್ತರಿಸಿ ಸಂಭ್ರಮವನ್ನು ಹಂಚಿಕೊಂಡರು.
ರಿಷಭ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಚಿತ್ರದ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಚಿತ್ರ ತಂಡಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಪ್ರಗತಿ ಶೆಟ್ಟಿ ಎಲ್ಲರ ಗಮನ ಸೆಳೆದಿದ್ದಾರೆ.
ಸಿನಿಮಾ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಹೊಂಬಾಳೆ ಫಿಲ್ಮ್ಸ್, ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದು. ಎಲ್ಲರ ಪ್ರೀತಿಗೂ ಚಿರಋಣಿ ಎಂದು ಹೇಳಿದೆ. ಇದೊಂದು ಐತಿಹಾಸಿಕ ಗೆಲುವು. ಚಿತ್ರ ತಂಡದ ಕಾರ್ಯವು ನಮಗೆ ಹೆಮ್ಮೆಯನ್ನುಂಟು ಮಾಡಿದೆ. ವಿಶ್ವದ ಪ್ರೀತಿ ಚಿತ್ರ ತಂಡಕ್ಕೆ ಸಿಕ್ಕಿದ್ದರಿಂದ ಚಿತ್ರ ಅಭೂತಪೂರ್ವ ಗೆಲುವು ದಾಖಲಿಸಲು ಕಾರಣ ಎಂದು ತಿಳಿಸಿದೆ.
ಚಿತ್ರದ ಗೆಲುವಿನ ಬಳಿಕ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಾವನಾತ್ಮಕ ಪತ್ರವನ್ನು ಪೋಸ್ಟ್ ಮಾಡಿದೆ. ದೈವಾರಾಧನೆ ಕರ್ನಾಟಕದ ಕರಾವಳಿ ಪ್ರದೇಶವಾದ ತುಳುನಾಡಿನಲ್ಲಿ ನಂಬಿಕೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಆಳವಾದ ಸಂಕೇತವಾಗಿದೆ. ಕಾಂತಾರ ಮತ್ತು ಕಾಂತಾರ ಅಧ್ಯಾಯ-1 ದೈವಗಳ ಮೇಲಿನ ಭಕ್ತಿಯನ್ನು ಗೌರವಯುತವಾಗಿ ಚಿತ್ರಿಸಲು ಮತ್ತು ವೈಭವವನ್ನು ಆಚರಿಸಲು ರಚಿಸಲಾಗಿದೆ ತುಳು ಮಣ್ಣಿನ ಮಹತ್ವ ಮತ್ತು ಪರಂಪರೆಯನ್ನು ಜಗತ್ತಿಗೆ ಹರಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಭಾವಿಸುತ್ತೇವೆ ಎಂದು ಹೇಳಿಕೊಂಡಿದೆ.