ಬೆಂಗಳೂರು: ಡಿ.25ರಂದು ಬಿಡುಗಡೆಯಾದ ಮ್ಯಾಕ್ಸ್ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ನಟ ಹೊಸ ಸಿನಿಮಾ ಘೋಷಿಸಿದ್ದಾರೆ.
ಸುದೀಪ್ ಕಡೆಯಿಂದ ಬಂದ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಆದರೆ, ಇದು ಸುದೀಪ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಅಲ್ಲ. ಅವರು ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.
ಕಿಚ್ಚನ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು ಕೆಆರ್‌ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾಗೆ ನಾಯಕನಾಗಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸುತ್ತಿದ್ದಾರೆ.
ಸಂಚಿತ್ ಚೊಚ್ಚಲ ಸಿನಿಮಾವಾಗಿದ್ದು, ಮೊದಲ ಸಿನಿಮಾಗೆ ಸುದೀಪ್ ಬಂಡವಾಳ ಹೂಡುತ್ತಿರೋದು ಸಿನಿಮಾ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ಸುದೀಪ್ ಸಹೋದರಿಯ ಪುತ್ರನ ಸಿನಿಮಾ ಆಗಿರೋದ್ರಿಂದ ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಂಚಿತ್ ಮೊದಲ ಸಿನಿಮಾಗೆ ವಿವೇಕ ನಿರ್ದೇಶನದ ಹೊಣೆಗಾರಿಕೆ ಹೊತ್ತಿದ್ದಾರೆ. ಇದು ನಿರ್ದೇಶಕರ ಚೊಚ್ಚಲ ಸಿನಿಮಾವಾಗಿದೆ.
ಈ ಮೊದಲು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿರೋ ವಿವೇಕ, ಈಗ ಸ್ವತಂತ್ರ ನಿರ್ದೇಶಕನಾಗಿ ಸ್ಯಾಂಡಲ್‌ವುಡ್ ಎಂಟ್ರಿ ಕೊಡುತ್ತಿದ್ದಾರೆ. ಮೈಸೂರು ಮೂಲದ ವಿವೇಕ ಅವರು ಸಂಚಿತ್‌ಗೆ ವಿಭಿನ್ನ ಕಥೆಯನ್ನ ತೆರೆ ಮೇಲೆ ತರುವ ಪ್ರಯತ್ನ ಮಾಡ್ತಿದ್ದಾರೆ.
ಇದು ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ದು, ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಜನವರಿ 24ರಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ. ಮುಹೂರ್ತದ ಬಳಿಕ ಶೂಟಿಂಗ್ ಕೂಡ ಅಂದಿನಿಂದಲೇ ಪ್ರಾರಂಭವಾಗಲಿದೆ.