ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ಕಾಣಿಸಿಕೊಂಡು, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕರ್ನಾಟಕದ ಜನತೆಗೆ ಹೊಸ ವರ್ಷದ ಶುಭ ಕೋರಿದ ಅವರು, ಮಾರಕ ಕ್ಯಾನ್ಸರ್ ಪೀಡೆಯಿಂದ ಶಿವಣ್ಣ ಗುಣಮುಖರಾಗಿರುವುದರನ್ನು ಖಚಿತಪಡಿಸಿದ್ದಾರೆ.
ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಹಾಸ್ಪಿಟಲ್‌ನಲ್ಲಿ ನಡೆದಿದ್ದ ನಟ ಶಿವರಾಜ್ ಕುಮಾರ್ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ಸಿನ ಬೆನ್ನಲ್ಲೇ ಇದೀಗ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಶಿವಣ್ಣ ಅವರ ಎಲ್ಲ ವೈದ್ಯಕೀಯ ವರದಿಗಳು ಸಕಾರಾತ್ಮಕವಾಗಿ ಬಂದಿವೆ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಅವರ ಎಲ್ಲ ವೈದ್ಯಕೀಯ ಪರೀಕ್ಷಾ ವರದಿಗಳು ಬಂದಿದ್ದು, ಎಲ್ಲದರಲ್ಲೂ ನೆಗೆಟಿವ್ ಬಂದಿದೆ. ಶಿವಣ್ಣ ಈಗ ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ವೈದ್ಯರು ಅಧಿಕೃತ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಗುರು-ಹಿರಿಯರ ಪ್ರಾರ್ಥನೆಯ ಫಲವಾಗಿ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಗುಣಮುಖರಾಗಿದ್ದಾರೆ. ನಿಮಗೆಲ್ಲರಿಗೂ ಧನ್ಯವಾದ ಎಂದು ಗೀತ ಶಿವರಾಜ್ ಕುಮಾರ್ ಹೇಳಿದ್ದಾರೆ.
ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ಅಭಿಮಾನಿಗಳ ದೇವರುಗಳ ಹಾರೈಕೆ ಮತ್ತು ಪ್ರಾರ್ಥನೆಯಿಂದ ಇಂದು ನಾನು ಗುಣಮುಖನಾಗಿದ್ದೇನೆ. ವೈದ್ಯರ ಅತ್ಯುತ್ತಮ ಚಿಕಿತ್ಸೆ ಮತ್ತು ನನ್ನ ಸ್ನೇಹಿತರು, ಸಹ ಕಲಾವಿದರ ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರಿಂದಲೇ ತಾವು ಇಂದು ಈ ಸ್ಥಿತಿಯಲ್ಲಿದ್ದೇನೆ. ನನ್ನ ಆರೋಗ್ಯ ಚೇತರಿಕೆಯಲ್ಲಿ ಗೀತಾ ಮತ್ತು ನನ್ನ ಮಗಳಾದ ನಿವೇದಿತಾ ಅವರ ಪಾತ್ರ ಬಹಳ ದೊಡ್ಡದು ಎಂದು ಶಿವಣ್ಣ ಹೇಳಿದ್ದಾರೆ. ಅಲ್ಲದೆ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿದ ಶಿವಣ್ಣ, ಆಸ್ಪತ್ರೆ ಸಿಬ್ಬಂದಿಗಳಿಗೂ ಶಿವರಾಜ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.