ಬೆಂಗಳೂರು: ವರ್ಷದ ಹಿಂದೆ ಬಿಡುಗಡೆ ಆಗಿದ್ದ ಜೈಲರ್ ಸಿನಿಮಾನಲ್ಲಿ ರಜನಿಕಾಂತ್ ಜೊತೆಗೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿನ ಶಿವಣ್ಣನ ಪಾತ್ರ ಭಾರಿ ಹಿಟ್ ಆಗಿತ್ತು. ಇದೀಗ ರಜನೀಕಾಂತ್ ಜೊತೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ನಟಿಸಲಿದ್ದಾರೆ.
 
									
			
			 
 			
 
 			
					
			        							
								
																	ರಜನಿಕಾಂತ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಪೂರ್ಣ ಪ್ರಮಾಣದ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ಎದುರು ವಿಲನ್ ಪಾತ್ರದಲ್ಲಿ ಉಪೇಂದ್ರ ಅಬ್ಬರಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
									
										
								
																	ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾನಲ್ಲಿ ರಜನಿಕಾಂತ್ ಬಣ್ಣ ಹಚ್ಚುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ, ರಜನೀಕಾಂತ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನು ಸ್ವತಃ ಅವರೇ ಮಾಧ್ಯಮಗಳ ಬಳಿ ಖಾತ್ರಿಪಡಿಸಿದ್ದಾರೆ. ಅಲ್ಲದೆ, ರಜನೀಕಾಂತ್ ಅಂಥಹಾ ಸೂಪರ್ ಸ್ಟಾರ್ ಹಾಗೂ ಲೋಕೇಶ್ ಕನಗರಾಜ್ ಅಂಥಹಾ ಪ್ರತಿಭಾವಂತರ ಜೊತೆಗೆ ನಟಿಸುತ್ತಿರುವುದು ನನ್ನ ಅದೃಷ್ಟ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.  
									
											
							                     
							
							
			        							
								
																	ಅಂದಹಾಗೆ ಉಪೇಂದ್ರಗೆ ಇದು ಎರಡನೇ ತಮಿಳು ಸಿನಿಮಾ. ಈ ಮೊದಲು ಸತ್ಯಂ ಹೆಸರಿನ ತಮಿಳು ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದರು. ಆ ಸಿನಿಮಾದಲ್ಲಿ ವಿಶಾಲ್ ನಾಯಕ. ಉಪೇಂದ್ರ ಈ ಹಿಂದೆ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರ ಕಬ್ಜ 2, 45 ಇನ್ನೂ ಕೆಲವು ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿದೆ.