Publish Date: Thu, 04 Jan 2024 (12:13 IST)
Updated Date: Thu, 04 Jan 2024 (12:15 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟ ಸಾಧು ಕೋಕಿಲಗೆ ಹಿಗ್ಗಾ ಮುಗ್ಗಾ ಹೊಡೆದು ಕತ್ತು ಹಿಸುಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!
ಆದರೆ ಇದೆಲ್ಲಾ ನಡೆದಿದ್ದು ತಮಾಷೆಗಾಗಿ. ನಟ ದರ್ಶನ್ ಅವರ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋನಲ್ಲಿ ಇಬ್ಬರೂ ಕುಚಿಕು ಗೆಳೆಯರು ಭೇಟಿಯಾಗಿದ್ದಾರೆ.
ಈ ವೇಳೆ ಉಪೇಂದ್ರ ಮೊದಲು ಸಾಧು ನೋಡಿ ತಲೆ ಬಾಗಿ ಕೈ ಮುಗಿದು ಬಳಿಕ ಸಿಕ್ಕ ಸಿಕ್ಕಲೆಲ್ಲಾ ಚಿಕ್ಕಮಕ್ಕಳಂತೆ ಹೊಡೆದಿದ್ದಾರೆ. ಬಳಿಕ ಅವರ ಕತ್ತಿಗೆ ಕೈ ಹಾಕಿ ಹುಸಿಮುನಿಸು ತೋರಿದ್ದಾರೆ. ಇಬ್ಬರೂ ಸ್ನೇಹಿತರು ಬಹಳ ದಿನಗಳ ನಂತರ ಭೇಟಿಯಾದಾಗ ಈ ರೀತಿ ಕಾಲೆಳೆದುಕೊಂಡಿದ್ದಾರೆ.
ಇವರಿಬ್ಬರ ತಮಾಷೆಗೆ ಪ್ರಿಯಾಂಕ ಉಪೇಂದ್ರ, ಕುಮಾರ್ ಗೋವಿಂದು ಸಾಕ್ಷಿಯಾಗಿದ್ದರು. ಎಲ್ಲರಿಗೂ ತಿಳಿದಿರುವ ಹಾಗೆ ಸಾಧು ಕೋಕಿಲಗೆ ಸಂಗೀತ ನಿರ್ದೇಶಕನಾಗಿ, ನಿರ್ದೇಶಕನಾಗಿ ಬ್ರೇಕ್ ಕೊಟ್ಟಿದ್ದೇ ಉಪೇಂದ್ರ. ಸಾಧು ಹೆಸರಿನ ಮುಂದೆ ಕೋಕಿಲ ಎಂಬ ಬಿರುದು ಕೊಟ್ಟಿದ್ದೂ ಉಪೇಂದ್ರ. ಹೀಗಾಗಿ ಇಬ್ಬರ ಸ್ನೇಹಕ್ಕೆ ಹಲವು ವರ್ಷಗಳ ನಂಟಿದೆ.