ಕೃಷ್ಣವೇಣಿ ಕೆ.
ಬೆಂಗಳೂರು: 90 ರ ದಶಕದಲ್ಲಿ ಅಥವಾ ಅದಕ್ಕಿಂತ ಮೊದಲು ನಿಮ್ಮ ಬಾಲ್ಯ ಕಳೆದಿದ್ದರೆ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಎಷ್ಟು ಆಪ್ತ ಎನ್ನುವುದು ಗೊತ್ತಿರುತ್ತದೆ.
ರೇಡಿಯೋಗೆ ಕಿವಿಯೊಡ್ಡಿ ಕೂತರೆ ಸಿಗುವ ಮಧುರ ಹಾಡುಗಳೇ ನಮಗೆ ಮನರಂಜನೆಯ ಮುಖ್ಯ ತಾಣ. ಆದರೆ ಇಂದು ಹೊಸ ಹೊಸ ಚಾನೆಲ್ ಗಳು, ಆಪ್ ಗಳು ಬಂದ ಮೇಲೆ ರೇಡಿಯೋವನ್ನು ಮರೆತೇ ಬಿಟ್ಟಿದ್ದೇವೆ. ಈಗ ಏನಿದ್ದರೂ ಎಫ್. ಎಂ. ಯುಗ.
ಆದರೂ ಸರ್ಕಾರಿ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳನ್ನು ಕೇಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಈಗಲೂ ಆಕಾಶವಾಣಿ ಬೆಂಗಳೂರು, ಮಂಗಳೂರು, ರಾಯಚೂರು, ಧಾರವಾಡ ಎಂದು ಪ್ರಾದೇಶಿಕ ನಿಲಯಗಳಿವೆ. ಆದರೆ ಅವುಗಳ ಪ್ರಸಾರ ರೀತಿ ಬದಲಾಗಿವೆ. ಮೊದಲಾಗಿದ್ದರೆ ಒಂದು ಕಾರ್ಯಕ್ರಮ ಒಂದೇ ನಿಲಯಕ್ಕೆ ಸೀಮಿತವಾಗಿದ್ದವು. ಈಗ ಒಂದು ಕಾರ್ಯಕ್ರಮ ರಾಜ್ಯಮಟ್ಟದ ಎಲ್ಲಾ ನಿಲಯಗಳಲ್ಲಿ ಪ್ರಸಾರವಾಗುತ್ತವೆ.
ಇತ್ತೀಚೆಗೆ ಹೊಸ ಕಾರ್ಯಕ್ರಮಗಳ ನಿರ್ಮಾಣವಾಗುತ್ತಿಲ್ಲ, ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ನಟ ಅನಿರುದ್ಧ್ ಜತ್ಕಾರ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದರು. ಅವರು ಹೇಳುವಂತೆ ನಿರ್ಮಾಣ ಚಟುವಟಿಕೆಗಳು ಕಡಿಮೆಯಾಗಿವೆ. ಸುಮಾರು 50 ದೂರದರ್ಶನ ರಿಲೇ ಕೇಂದ್ರಗಳನ್ನು ಮುಚ್ಚಲಾಗಿದೆ. ಹೊಸ ಪ್ರತಿಭೆಗಳ ಅಡಿಷನ್ ನಡೆಯುತ್ತಿಲ್ಲ. ಕಾರ್ಯಕ್ರಮ ಕೇಂದ್ರೀಕರಣದಿಂದಾಗಿ ಸ್ಥಳೀಯ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಇತರೆ ಭಾಷೆಯವರಿಗೆ ಅವಕಾಶ ನೀಡಲಾಗುತ್ತಿದೆ. ಅಮೃತವರ್ಷಣಿ ಎಫ್ ಎಂ ಚಾನೆಲ್ ನ್ನು ನಿಲ್ಲಿಸಲಾಗಿದೆ. ಪ್ರಸಾರ ಭಾರತಿ ಅಧಿಕಾರಿಗಳು ಕನ್ನಡಿಗರ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬಿತ್ಯಾದಿ ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಆಕಾಶವಾಣಿ ಕೇಂದ್ರದ ಮೂಲಗಳನ್ನೇ ಸಂಪರ್ಕಿಸಿದಾಗ ಅವರು ಅದಕ್ಕೊಂದು ಸಮರ್ಥನೆಯನ್ನು ಕೊಟ್ಟಿದ್ದಾರೆ. ಆಕಾಶವಾಣಿಯಲ್ಲಿ ಹೊಸ ಕಾರ್ಯಕ್ರಮಗಳು ನಿರ್ಮಾಣವಾಗುತ್ತಿಲ್ಲ ಎನ್ನುವುದು ತಪ್ಪು ಕಲ್ಪನೆ. ಈಗಲೂ ಹೊಸ ಹೊಸ ಕತೆ, ಭಾಷಣ, ಸ್ವಾತಂತ್ರ್ಯೋತ್ಸವದ ನಿಮಿತ್ತ ಕಾರ್ಯಕ್ರಮ ಸರಣಿ ಪ್ರಸಾರವಾಗುತ್ತಿದೆ. ಆದರೆ ಈಗ ಮೊದಲಿನಂತೆ ಒಂದೇ ನಿಲಯಕ್ಕೆ ಸೀಮಿತವಾಗಿಲ್ಲ. ಈಗ ಕಾರ್ಯಕ್ರಮಗಳು ಒಂದು ನಿಲಯದಲ್ಲಿ ನಿರ್ಮಾಣವಾದರೆ ರಾಜ್ಯಮಟ್ಟದಲ್ಲಿ ಪ್ರಸಾರವಾಗುತ್ತಿದೆ. ಹೊಸ ಕಲಾವಿದರ ಅಡಿಷನ್ ಗಳು ನಡೆಯುತ್ತಿವೆ. ಇಂದಿನ ಕಾಲದಲ್ಲಿ ಕಲಾವಿದರ ಸಂಖ್ಯೆ ಸಾಕಷ್ಟಿದೆ. ನಮಗೆ ಪ್ರಸಾರ ಮಾಡಲು ಸಿಗುವುದು ಕೇವಲ 52 ವಾರಗಳು ಮಾತ್ರ. ಒಂದು ವರ್ಷದಲ್ಲಿ ಸಾವಿರಾರು ಕಲಾವಿದರ ಅಡಿಷನ್ ಮಾಡಿರುತ್ತೇವೆ. ಅವರೆಲ್ಲರಿಗೂ ಅವಕಾಶ ಕೊಡುವಾಗ ನಿಧಾನವಾಗಬಹುದು. ಈಗಾಗಲೇ ಆಡಿಷನ್ ಮಾಡಿಟ್ಟಿರುವ ಸಾಕಷ್ಟು ಕಲಾವಿದರಿದ್ದಾರೆ. ಹೊಸಬರಿಗೆ ಅವಕಾಶವೇ ಇಲ್ಲ ಎನ್ನಲಾಗದು. ಸಂಖ್ಯೆ ಸಾಕಷ್ಟಿರುವುದರಿಂದ ಕಾಯಬೇಕಾಗುತ್ತದೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಕೊವಿಡ್ ನಿಂದಾಗಿ ಹೊಸ ಅಡಿಷನ್, ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಿದೆಯಷ್ಟೆ.
ಇನ್ನು ಪ್ರತಿನಿತ್ಯ ಪ್ರಧಾನಿಯವರ ಸಂದೇಶ ಇತ್ಯಾದಿ, ಕಡ್ಡಾಯ ಪ್ರಸಾರ ಮಾಡಬೇಕಾದ ಸರ್ಕಾರಿ ಕಾರ್ಯಕ್ರಮಗಳಿರುತ್ತವೆ. ಇದರಿಂದಾಗಿ ನಮಗೆ ಪ್ರತಿನಿತ್ಯ ಒಂದು ಅಥವಾ ಎರಡು ಗಂಟೆ ಅದಕ್ಕೆ ಮೀಸಲಿಡಬೇಕಾಗುತ್ತದೆ. ಆಗ ನಮ್ಮ ಪ್ರಾದೇಶಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗಬಹುದು. ಮೊದಲೆಲ್ಲಾ ಇದು ಕಡಿಮೆಯಿತ್ತು ಎನ್ನುವುದು ಅಧಿಕಾರಿಯೊಬ್ಬರ ಮಾತು.
ಅನುದಾನಕ್ಕೇನೂ ಕೊರತೆಯಾಗಿಲ್ಲ: ಆಕಾಶವಾಣಿ ನಿಲಯಗಳಿಗೆ ಹೊಸ ಕಾರ್ಯಕ್ರಮಗಳ ನಿರ್ಮಾಣಕ್ಕೆ ಅನುದಾನ ಬರುತ್ತಿಲ್ಲ ಎಂಬ ಅಪವಾದಗಳಿವೆ. ಆದರೆ ಅನುದಾನವೇನೂ ಕಡಿಮೆಯಾಗಿಲ್ಲ. ಸಂಗೀತ ಕಾರ್ಯಕ್ರಮವೊಂದರ ನಿರ್ಮಾಣಕ್ಕೆ ಮುಂದಿನ ವರ್ಷಕ್ಕೆ ಎಷ್ಟು ಅನುದಾನ ಬೇಕಾಗುತ್ತದೆ ಎಂದು ಈಗ ಅಂದಾಜು ಲೆಕ್ಕ ಹಾಕಿಕೊಟ್ಟರೆ ಅದು ಬಿಡುಗಡೆಯಾಗಿಯೇ ಆಗುತ್ತದೆ. ಅದಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನುವುದು ಬಲ್ಲ ಮೂಲಗಳ ಮಾಹಿತಿ.
ಸ್ಟಾಫ್ ಸಂಖ್ಯೆ ಕಡಿಮೆ: ಇನ್ನು, ಆಕಾಶವಾಣಿಯಲ್ಲಿ ಸ್ಟಾಫ್ ಗಳು ಕಡಿಮೆ ಎನ್ನುವುದು ಒಪ್ಪುವಂತದ್ದು. ಇದಕ್ಕೆ ಪ್ರಸಾರ ಭಾರತಿಯ ನಿಯಮವೂ ಕಾರಣವಾಗಿದೆ. ಇರುವ ಸ್ಟಾಫ್ ಗಳೇ ಎಲ್ಲಾ ಕೆಲಸವನ್ನೂ ಮಾಡಬೇಕಾಗುತ್ತದೆ. ಹೀಗಾಗಿ ಸಮಸ್ಯೆಗಳಾಗುತ್ತಿರಬಹುದು. ದೂರದರ್ಶನದಲ್ಲೂ ಇದೇ ಸಮಸ್ಯೆ. ನೌಕರರ ಕೊರತೆಯಿಂದಾಗಿ ಆಕಾಶವಾಣಿಯಲ್ಲಿ ಮಾಡಿದ ಕಾರ್ಯಕ್ರಮಗಳನ್ನೇ ವಿಡಿಯೋ ಸೇರ್ಪಡೆಗೊಳಿಸಿ ಕನ್ನಡದಲ್ಲಿ ಪ್ರಸಾರ ಮಾಡುತ್ತಾರೆ. ಯಾಕೆಂದರೆ ಇಲ್ಲಿ ಕನ್ನಡಿಗ ನೌಕರರು ಕಡಿಮೆ. ಪರಭಾಷಿಕರಿಗೆ ಕನ್ನಡ ಕಾರ್ಯಕ್ರಮಗಳನ್ನು ಮಾಡಲು ಗೊತ್ತಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮಲ್ಲಿ ನಿರ್ಮಾಣವಾದ ಕಾರ್ಯಕ್ರಮಗಳನ್ನು ಅಲ್ಲಿ ವಿಡಿಯೋ ಸಮೇತ ಪ್ರಸಾರ ಮಾಡಬೇಕಾಗುತ್ತದೆ. ಅಲ್ಲೂ ಹೊಸ ಕಾರ್ಯಕ್ರಮಗಳು ಪ್ರಸಾರವೇ ಆಗುತ್ತಿಲ್ಲ ಎಂದೇನಿಲ್ಲ. ಆದರೆ ಆಕಾಶವಾಣಿಯಂತೇ ಕೆಲವು ಸಮಸ್ಯೆಗಳಿವೆ.
ಅಮೃತವರ್ಷಿಣಿ ಪ್ರಸಾರ ನಿಲ್ಲಿಸಿಲ್ಲ: ಅಮೃತವರ್ಷಿಣಿ ಎಫ್.ಎಂ. ಚಾನೆಲ್ ಸ್ಥಗಿತವಾಗಿಲ್ಲ. ಆಪ್ ನಲ್ಲಿ ಈಗಲೂ ವಾಹಿನಿ ಲಭ‍್ಯವಿದೆ. ಡಿಟಿಎಚ್ ನಲ್ಲಿ ಕನ್ನಡ ವಿವಿಧ ಭಾರತಿ ಬರುತ್ತಿಲ್ಲ ಎನ್ನುವುದು ನಿಜ. ಆದರೆ ಆಪ್ ನಲ್ಲಿ ಎಲ್ಲವೂ ಲಭ್ಯವಿದೆ. ಯಾವುದೇ ನಿಲಯವನ್ನೂ ಸ್ಥಗಿತಗೊಳಿಸಲಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಆದರೆ ಇದು ಕೇವಲ ಆಪ್ ಗೆ ಸೀಮಿತವಾಗಿರದೇ ರೇಡಿಯೋ ಸಾಮಾನ್ಯ ಕೇಳುಗನಿಗೂ ತಲುಪುವಂತಾಗಬೇಕು. ಡಿಟಿಎಚ್ ನಲ್ಲಿ ಪ್ರಸಾರವಾಗುವುದರಿಂದ ಹಳ್ಳಿ ಹಳ್ಳಿಯಲ್ಲಿರುವ ಕೇಳುಗರಿಗೂ ರೇಡಿಯೋ ತಲುಪುವಂತಾಗುತ್ತದೆ.
ಕೇಳುಗರು ಕಡಿಮೆಯಾಗಿಲ್ಲ: ಹಾಗಂತ ಆಕಾಶವಾಣಿ ಕೇಳುಗರ ಸಂಖ್ಯೆ ಕಡಿಮೆಯಾಗಿಲ್ಲ. ನಮ್ಮಲ್ಲಿ ಎಷ್ಟೇ ಆಪ್, ಹಾಡುಗಳನ್ನು ಕೇಳಲು ಆಯ್ಕೆಗಳು ಬಂದರೂ ಒಂದು ಗಂಟೆ ಪ್ರಸಾರ ಮಾಡುವ ಚಿತ್ರಗೀತೆ ಕಾರ್ಯಕ್ರಮಕ್ಕೆ 300-400 ಮಂದಿ ಎಸ್ ಎಂಎಸ್ ಮೂಲಕ ರಿಕ್ವೆಸ್ಟ್ ಕಳುಹಿಸುತ್ತಾರೆ. ಯಾವುದೇ ಆಪ್ ಗಳು ಬಂದರೂ ಆಯ್ಕೆಗಳು ಬಂದರೂ ಆಕಾಶವಾಣಿಯ ಕೇಳುಗರ ಸಂಖ್ಯೆ ಕಡಿಮೆಯಾಗಿಲ್ಲ ಎನ್ನುವುದು ನಿರೂಪಕರೊಬ್ಬರ ಅಭಿಪ್ರಾಯ.
ಕೆಲವು ಆಕಾಶವಾಣಿ ನಿಲಯಗಳ ಫ್ರೀಕ್ವೆನ್ಸಿ ಕಡಿಮೆಯಾಗಿರುವುದಕ್ಕೆ ಟವರ್ ಗಳ ಕೊರತೆ ಕಾರಣವಾಗಿರುತ್ತದೆ. ಇದಕ್ಕೆ ಆಯಾ ಸ್ಥಳೀಯಾಡಳಿತ, ರಾಜಕೀಯ ನೌಕರರ ಇಚ್ಛಾಶಕ್ತಿ ಬೇಕು. ಹೆಚ್ಚು ಸಂಖ್ಯೆಯಲ್ಲಿ ನೌಕರರನ್ನು ನೇಮಿಸಿಕೊಂಡು ಮತ್ತು ಇಂತಹ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಂಡರೆ ಆಕಾಶವಾಣಿ, ದೂರದರ್ಶನ ಕೇಂದ್ರಗಳನ್ನು ಉಳಿಸಿಕೊಳ್ಳಬಹುದು. ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ವ್ಯಾಪ್ತಿಗೆ ಬರುವುದು. ಅವರ ನಿಯಮಗಳಿಗನುಸಾರವಾಗಿ ಪ್ರಾದೇಶಿಕ ವಲಯಗಳೂ ಕೆಲಸ ಮಾಡುತ್ತವೆ. ಇದರಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರವಿಲ್ಲ. ಆದರೆ ಪ್ರಾದೇಶಿಕ ನಿಲಯಗಳ ಪ್ರಸಾರದ ಬಗ್ಗೆ ಸ್ಥಳೀಯರೇ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು. ಖಾಸಗಿ ವಾಹಿನಿಗಳು, ನಿಲಯಗಳ ಜೊತೆಗೆ ಸ್ಪರ್ಧೆಗಿಳಿಯಬೇಕಾದರೆ ಇಂತಹ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.