ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಐಪಿಎಲ್ 18ನೇ ಆವೃತ್ತಿಯು ಮಾರ್ಚ್ 22ರಿಂದ ಆರಂಭಗೊಂಡು ಎರಡು ತಿಂಗಳುಗಳ ಕಾಲ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ನೀಡಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇನ್ನೂ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ, ಮೂಲಗಳ ಪ್ರಕರಣ ಮುಂದಿನ ತಿಂಗಳಿಂದ ಐಪಿಎಲ್ 2025 ಆರಂಭವಾಗಲಿದ್ದು, ಮೇ ತಿಂಗಳಾಂತ್ಯದಲ್ಲಿ ಫೈನಲ್ ಪಂದ್ಯ ಜರುಗಲಿದೆ. ಈ ಬಾರಿ ಉದ್ಘಾಟನಾ ಮತ್ತು ಫೈನಲ್ ಪಂದ್ಯಗಳನ್ನು ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ.
ಮಾರ್ಚ್ 22 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಕಳೆದ ಬಾರಿಯ ರನ್ನರ್ ಅಪ್ ಸನ್ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯವನ್ನು ತವರಿನಲ್ಲಿ ಆಡಲು ನಿರ್ಧರಿಸಿದೆ.
ಅದರಂತೆ ಮಾರ್ಚ್ 23 ರಂದು ಉಪ್ಪಲ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಟೂರ್ನಿಯು 10 ನಿಯಮಿತ ಕೇಂದ್ರಗಳಾದ ಅಹಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಲಕ್ನೋ, ಮುಲ್ಲನ್‌ಪುರ, ದೆಹಲಿ, ಕೊಲ್ಕತ್ತಾ, ಹೈದರಾಬಾದ್ ಮತ್ತು ಜೈಪುರದಲ್ಲಿ ನಡೆಯಲಿದೆ. ಇದರ ಜೊತೆಗೆ ಗುವಾಹಟಿ ಮತ್ತು ಧರ್ಮಶಾಲಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್‌ಗೆ ಮತ್ತು ಗುವಾಹಟಿಯು ರಾಜಸ್ಥಾನ್ ರಾಯಲ್ಸ್‌ಗೆ ಎರಡನೇ ತವರಾಗಿದೆ.