ಬೆಂಗಳೂರು: ಐಪಿಎಲ್ 2025 ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ಕನ್ನಡಿಗ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಡೆಗಣಿಸಿದೆ. ಕನ್ನಡಿಗ ಆಟಗಾರರ ಹೆಸರು ಬಂದರೆ ಬಿಡ್ಡಿಂಗ್ ಮಾಡಲು ಆಸಕ್ತಿಯೇ ತೋರಿಸದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಹರಾಜಿಗೆ ಬಂದಿದ್ದರು. ಆದರೆ ಇಬ್ಬರನ್ನೂ ಆರ್ ಸಿಬಿ ಖರೀದಿಸಿಲ್ಲ. ಅದರಲ್ಲೂ ಪ್ರಸಿದ್ಧ ಕೃಷ್ಣಗೆ ಬಿಡ್ಡಿಂಗ್ ಮಾಡಲೂ ಆಸಕ್ತಿ ತೋರಲಿಲ್ಲ. ವಿಶೇಷವೆಂದರೆ ಪ್ರಸಿದ್ಧ ಕೃಷ್ಣ ಹೆಸರು ಬಂದಾಗ ರಾಹುಲ್ ದ್ರಾವಿಡ್ ಕೋಚ್ ಆಗಿರುವ ರಾಜಸ್ಥಾನ್ ತಂಡ ಬಿಡ್ಡಿಂಗ್ ಮಾಡಿತು.
ಆದರೆ ಅಂತಿಮವಾಗಿ ಅವರು ಗುಜರಾತ್ ಟೈಟನ್ಸ್ ತಂಡಕ್ಕೆ 9 ಕೋಟಿ ರೂ.ಗೆ ಬಿಕರಿಯಾದರು. ಅವರ ಮೂಲ ಬೆಲೆ 2 ಕೋಟಿ ರೂ.ಗಳಷ್ಟಾಗಿತ್ತು. ಆರ್ ಸಿಬಿಯಲ್ಲಿ ಸ್ಥಳೀಯ ಆಟಗಾರರಿಲ್ಲ ಎಂಬ ಕೊರಗು ಇಲ್ಲಿನ ಅಭಿಮಾನಿಗಳಿತ್ತು. ಈ ಬಾರಿ ಹರಾಜಿನಲ್ಲಾದರೂ ಆ ಕೊರತೆ ನೀಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು.
ಇದುವರೆಗೆ ಕಪ್ ಗೆಲ್ಲದೇ ಇದ್ದರೂ ಆರ್ ಸಿಬಿ ತಂಡಕ್ಕೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ತಂಡಕ್ಕೂ ಇಲ್ಲ. ನಮ್ಮ ಕನ್ನಡಿಗ ಆಟಗಾರರಿಗೆ ಅವಕಾಶ ನೀಡಿ ಎಂದು ಹಲವು ವರ್ಷಗಳಿಂದಲೂ ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅಭಿಮಾನಿಗಳ ಬಯಕೆಗೆ ಈ ಬಾರಿಯೂ ಆರ್ ಸಿಬಿ ಮ್ಯಾನೇಜ್ ಮೆಂಟ್ ತಣ್ಣೀರೆರಚಿದೆ. 83 ಕೋಟಿ ರೂ.ಗಳಷ್ಟು ಹಣವಿದ್ದರೂ ಸರಿಯಾದ ಆಟಗಾರರನ್ನು ಖರೀದಿಸುವಲ್ಲಿ ಈ ಬಾರಿಯೂ ಆರ್ ಸಿಬಿ ಎಡವಿದೆ.