ಬೆಂಗಳೂರು: ಈ ಬಾರಿ ಐಪಿಎಲ್ ಹರಾಜಿನಲ್ಲಿ ಕನ್ನಡಿಗ ಆಟಗಾರ ಕೆಎಲ್ ರಾಹುಲ್ ಆರ್ ಸಿಬಿ ಮರಳಿ ಬರುತ್ತಾರೆ ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಆರ್ ಸಿಬಿ ಈ ಬಾರಿಯೂ ರಾಹುಲ್ ರನ್ನು ಬಿಟ್ಟುಕೊಟ್ಟಿದ್ದು ಆಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿತ್ತು.
ರಾಹುಲ್ ಎಲ್ಲೇ ಹೋದರೂ ಈ ಬಾರಿ ಆರ್ ಸಿಬಿಗೆ ಬನ್ನಿ ಎಂದು ಹೇಳುತ್ತಲೇ ಇದ್ದರು. ಅದರಂತೆ ರಾಹುಲ್ ಕೂಡಾ ಈ ಬಾರಿ ಲಕ್ನೋ ತೊರೆದಿದ್ದು, ಹಲವು ಸಂದರ್ಶನಗಳಲ್ಲಿ ಆರ್ ಸಿಬಿ ನನ್ನ ತವರು, ಈ ತಂಡದ ಪರ ಆಡುವ ಆಸೆಯಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಈ ಬಾರಿ ಆರ್ ಸಿಬಿಗೂ ಒಬ್ಬ ವಿಕೆಟ್ ಕೀಪರ್, ಓಪನರ್, ನಾಯಕನ ಸ್ಥಾನ ತುಂಬಬಲ್ಲ ಆಟಗಾರನ ಅವಶ್ಯಕತೆಯಿತ್ತು. ಹೀಗಾಗಿ ರಾಹುಲ್ ಈ ಬಾರಿ ಪಕ್ಕಾ ಆರ್ ಸಿಬಿಗೆ ಬರುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ರಾಹುಲ್ ಹೆಸರು ಬಂದಾಗ ಕೇವಲ 10 ಕೋಟಿಯವರೆಗೆ ಮಾತ್ರ ಆರ್ ಸಿಬಿ ಬಿಡ್ಡಿಂಗ್ ಮಾಡಿತು. ಆದರೆ ಕೊನೆಗೆ 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿತು.
ರಾಹುಲ್ ಗೆ ಬಿಡ್ಡಿಂಗ್ ಮಾಡದ ಆರ್ ಸಿಬಿ ಮೇಲೆ ಅಭಿಮಾನಿಗಳು ಭಾರೀ ಸಿಟ್ಟಾಗಿದ್ದಾರೆ. ನಿಮ್ಮ ಬಳಿ ಅಷ್ಟು ದುಡ್ಡು ಇತ್ತು, ಆದರೂ ರಾಹುಲ್ ರನ್ನು ಯಾಕೆ ಖರೀದಿ ಮಾಡಿಲ್ಲ. ರಾಹುಲ್ ರನ್ನು ಬಿಟ್ಟುಕೊಟ್ಟು ನಮ್ಮ ಭಾವನೆಗೆ ಬೆಲೆಕೊಡದ ಮೇಲೆ ನಿಮಗೆ ನಮ್ಮ ಬೆಂಬಲವೂ ಇಲ್ಲ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ವೆಂಕಟೇಶ್ ಅಯ್ಯರ್ ಖರೀದಿಗೆ ಆರ್ ಸಿಬಿ 20 ಕೋಟಿಯವರೆಗೂ ಬಿಡ್ಡಿಂಗ್ ಮಾಡಿತ್ತು. ಆದರೆ ಕನ್ನಡಿಗನ ಆಯ್ಕೆಗೆ ನಿರಾಸಕ್ತಿ ತೋರಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.