ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ವಿರುದ್ಧ ನೀಡಿರುವ ಔಟ್ ತೀರ್ಪು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದೆ. ಆದರೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ಉತ್ತಮವಾಗಿ ಆಡುತ್ತಿದ್ದರು. ಆದರೆ ಅವರ ವಿರುದ್ಧ ನೀಡಿರುವ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಬಾಲ್ ಬ್ಯಾಟ್ ಅಥವಾ ಪ್ಯಾಡ್ ಗೆ ತಾಕಿದೆಯೇ ಎಂದು ಸ್ಪಷ್ಟವಾಗದೇ ಇದ್ದರೂ ಅಂಪಾಯರ್ ಔಟ್ ತೀರ್ಪು ನೀಡಿದರು.
ಸ್ನಿಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ವಿರುದ್ಧ ಥರ್ಡ್ ಅಂಪಾಯರ್ ಔಟ್ ತೀರ್ಪು ನೀಡಿದ್ದಾರೆ. ಸಾಮಾನ್ಯವಾಗಿ ಅನುಮಾನವಿದ್ದರೆ ಅದರ ಲಾಭವನ್ನು ಬ್ಯಾಟಿಗರಿಗೆ ನೀಡಲಾಗುತ್ತದೆ. ಆದರೆ ಇಲ್ಲಿ ರಾಹುಲ್ ವಿರುದ್ಧ ತೀರ್ಪು ನೀಡುವ ಮೂಲಕ ಅಂಪಾಯರ್ ಭಾರತಕ್ಕೆ ದೊಡ್ಡ ಮೋಸ ಮಾಡಿದ್ದಾರೆ.
ರಾಹುಲ್ ವಿಕೆಟ್ ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದೆಡೆ ತಾಳ್ಮೆಯಿಂದ ಆಡುತ್ತಾ ಭಾರತಕ್ಕೆ ಆಧಾರವಾಗಿದ್ದರು. ಆದರೆ ರಾಹುಲ್ ವಿರುದ್ಧ ತಪ್ಪು ತೀರ್ಪು ನೀಡುವ ಮೂಲಕ ಅಂಪಾಯರ್ ದೊಡ್ಡ ಆಘಾತವನ್ನೇ ನೀಡಿದ್ದಾರೆ.