ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮಾಡುವಾಗ ಕೆಎಲ್ ರಾಹುಲ್ ಗೆ ಗಾಯವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಪರ್ತ್ ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಕೌಟುಂಬಿಕ ಕಾರಣಗಳಿಂದ ಲಭ್ಯರಾಗುವುದು ಅನುಮಾನವಾಗಿದೆ. ಹೀಗಾಗಿ ಟೀಂ ಇಂಡಿಯಾ ಕೆಎಲ್ ರಾಹುಲ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ. ರಾಹುಲ್ ಕೂಡಾ ಮತ್ತೆ ಫಾರ್ಮ್ ಕಂಡುಕೊಳ್ಳುವ ನಿಟ್ಟಿನಿಂದ ಆಸ್ಟ್ರೇಲಿಯಾದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಪರ್ತ್ ನಲ್ಲಿ ಕೋಚ್ ಗೌತಮ್ ಗಂಭೀರ್ ಕಣ್ಗಾವಲಿನಲ್ಲಿ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದು, ಬ್ಯಾಟಿಂಗ್ ಮಾಡುವಾಗ ಕೆಎಲ್ ರಾಹುಲ್ ಮೊಣಕೈಗೆ ಚೆಂಡು ಬಡಿದು ಗಾಯವಾಗಿದೆ. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿದರೂ ನಂತರ ಅಭ್ಯಾಸ ನಡೆಸಲಾಗದೇ ನೋವು ಅನುಭವಿಸಿದ್ದು ಕಂಡುಬಂದಿದೆ.
ಬಳಿಕ ಸಹಾಯಕ ಸಿಬ್ಬಂದಿ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ. ನವಂಬರ್ 22 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆ ಸಂದರ್ಭಕ್ಕೆ ರಾಹುಲ್ ಗುಣಮುಖರಾಗುವುದು ಭಾರತ ತಂಡಕ್ಕೆ ತುಂಬಾ ಮುಖ್ಯವಾಗಿದೆ. ರಾಹುಲ್ ಗಾಯ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮೂಡಿಸಿದೆ.