ವಾಂಡರರ್ಸ್: ಭಾರತ ಮತ್ತು ದ ಆಫ್ರಿಕಾ ನಡುವಿನ ನಾಲ್ಕನೇ ಮತ್ತು ಕೊನೆಯ ಟಿ20 ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಜೊತೆಗೆ ಈ ಒಂದು ವಿಚಾರ ತಲೆನೋವಾಗಿದೆ.
ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಕೂದಲೆಳೆಯಲ್ಲಿ ಸೋತಿತ್ತು. ಮೂರನೇ ಪಂದ್ಯದಲ್ಲಿ ಮತ್ತೆ ರೋಚಕವಾಗಿ ಗೆದ್ದುಕೊಂಡು ಸರಣಿ ಮುನ್ನಡೆ ಗಳಿಸಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ಗೆಲುವು ಸೋತರೆ ಸರಣಿ ಸಮಬಲವಾಗಲಿದೆ.
ಭಾರತ ತಂಡಕ್ಕೆ ಈಗ ಚಿಂತೆಯಾಗಿ ಕಾಡುತ್ತಿರುವುದು ಆರಂಭಿಕ ಬ್ಯಾಟಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್. ಮೊದಲ ಎರಡು ಪಂದ್ಯಗಳಲ್ಲಿ ಅಭಿಷೇಕ್ ಶರ್ಮ ವಿಫಲರಾದರೆ ಮೂರನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೈ ಕೊಟ್ಟರು. ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ. ಇದರಿಂದ ಮಧ್ಯಮ ಕ್ರಮಾಂಕಕ್ಕೆ ಹೊಡೆತ ಬೀಳುತ್ತಿದೆ. ಈ ಎರಡು ಚಿಂತೆ ಸರಿಪಡಿಸಿಕೊಂಡರೆ ಭಾರತಕ್ಕೆ ಬೇರೆ ಸಮಸ್ಯೆಗಳಿಲ್ಲ.
ಇನ್ನು, ಈ ಪಂದ್ಯಕ್ಕೂ ಭಾರತ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ಬೌಲರ್ ಗಳು ವಿಶೇಷವಾಗಿ ವರುಣ್ ಚಕ್ರವರ್ತಿ, ಅರ್ಷ್ ದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8.30 ಕ್ಕೆ ಆರಂಭವಾಗಲಿದೆ.