ಸೆಂಚೂರಿಯನ್: ಭಾರತ ಮತ್ತು ದ ಆಫ್ರಿಕಾ ನಡುವೆ ಇಂದು ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೂ ಇದು ನಿರ್ಣಾಯಕ ಪಂದ್ಯವಾಗಿದೆ. ಭಾರತ ತಂಡ ಓಪನರ್ ಅಭಿಷೇಕ್ ಶರ್ಮಾಗೆ ಕೊಕ್ ಕೊಡುವ ಸಾಧ್ಯತೆಯಿದೆ.
ಟೀಂ ಇಂಡಿಯಾ ಮೊದಲ ಪಂದ್ಯವನ್ನು ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್, ಬೌಲರ್ ಗಳ ಪರಾಕ್ರಮದಿಂದ ಅದ್ಭುತವಾಗಿ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಹಂತದಲ್ಲಿ ಎಡವಿತು. ಗೆಲ್ಲಬೇಕಿದ್ದ ಪಂದ್ಯವನ್ನು ಕೊನೆಯ ಹಂತದಲ್ಲಿ ಕೈ ಚೆಲ್ಲಿತು.
ಆದರೆ ಇಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾಗೆ ಕಳೆದ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೂ ಅವರು ಉಪಯುಕ್ತ ಆಟಗಾರ.
ಟೀಂ ಇಂಡಿಯಾಗೆ ಸಮಸ್ಯೆಯಾಗುತ್ತಿರುವುದು ಅಭಿಷೇಕ್ ಶರ್ಮಾರಿಂದ. ಐಪಿಎಲ್ ಹೀರೋ ರಾಷ್ಟ್ರೀಯ ತಂಡದಲ್ಲಿ ಆರಂಭದಲ್ಲೇ ಶತಕ ಗಳಿಸಿ ಮಿಂಚಿದ್ದು ಬಿಟ್ಟರೆ ಇತ್ತೀಚೆಗಿನ ದಿನಗಳಲ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. ಈ ಕಾರಣಕ್ಕೆ ಅವರನ್ನು ತಂಡದಿಂದ ಹೊರಗಿಡಲು ಒತ್ತಾಯಗಳು ಕೇಳಿಬರುತ್ತಿದ್ದವು. ಆದರೆ ಅವರ ಸ್ಥಾನದಲ್ಲಿ ಆಡಲು ಸೂಕ್ತ ಓಪನರ್ ಗಳು ಭಾರತದ ಬಳಿ ಇಲ್ಲ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8.30 ಕ್ಕೆ ಆರಂಭವಾಗಲಿದೆ.