ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆ ಅಂಗೀಕಾರ ಪಡೆಯುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಮೀಸಲಾತಿ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ಆರ್‌ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರತಿ ಬಾರಿಯೂ ಕನ್ನಡಿಗ ಆಟಗಾರರಿಗೆ ಅವಕಾಶ ನೀಡುವುದಿಲ್ಲ. ಪ್ರತಿ ಬಾರಿ ಹರಾಜು ನಡೆದಾಗಲೂ ಆರ್‌ಸಿಬಿ ಅಭಿಮಾನಿಗಳು ಕನ್ನಡಿಗ ಆಟಗಾರರ ಕಡೆಗಣನೆಯ ಬಗ್ಗೆ ಫ್ರಾಂಚೈಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ.
ಇದೀಗ ಕರ್ನಾಟಕದಲ್ಲಿ ಖಾಸಗಿ ಕೈಗಾರಿಕೆಗಳಲ್ಲಿ ಸರ್ಕಾರ ಮೀಸಲಾತಿ ಜಾರಿಗೆ ತರುತ್ತಿರುವ ಬೆನ್ನಲ್ಲೇ ಐಪಿಎಲ್ನಲ್ಲಿ ಆರ್‌ಸಿಬಿ ತಂಡದಲ್ಲಿಯೂ ಶೇ 50ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ. ಆರ್ಸಿಬಿಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೀಸಲಾತಿ ಜಾರಿ ಮಾಡುವಂತೆ ಹಲವು ಟ್ವೀಟ್ ಮಾಡಲಾರಂಭಿಸಿದ್ದಾರೆ.
ಐಪಿಎಲ್ ಆರಂಭವಾಗಿ 17 ಆವೃತ್ತಿ ಕಳೆದರೂ ಕೂಡ ಆರ್‌ಸಿಬಿ ಕಪ್ ಗೆದ್ದಿಲ್ಲ. ನಮ್ಮ ರಾಜ್ಯದ ಅದೆಷ್ಟೋ ಸ್ಟಾರ್ ಆಟಗಾರರಿದ್ದರೂ ಕೂಡ ಅವರನ್ನು ಆರ್‌ಸಿಬಿ ಖರೀದಿ ಮಾಡದೆ ಸರಿಯಾಗಿ ಆಡಲು ಬಾರದ ಆಟಗಾರರಿಗೆ ಅತ್ಯಧಿಕ ಮೊತ್ತದ ಬಿಡ್ ಮಾಡಿ ತಂಡ ಸೇರಿಸಿಕೊಳ್ಳುತ್ತಿದೆ. ಈ ಬಾರಿಯ ಮೆಗಾ ಹರಾಜಿನಲ್ಲಾದರು ಕನ್ನಡಿಗ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.