ಇತ್ತೀಚೆಗಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೂ ಹೃದಯ ಖಾಯಿಲೆಗಳು ಹೆಚ್ಚಾಗುತ್ತಿವೆ. ಮೆಟ್ಟಿಲು ಹತ್ತುವಾಗಲೂ ಹೃದಯ ಪರೀಕ್ಷೆ ಮಾಡಬಹುದು. ಹೇಗೆ ಎಂದು ಸಾಕಷ್ಟು ಸಂವಾದಗಳಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ.
ಇಂದಿನ ಜೀವನಶೈಲಿಯಿಂದಾಗಿ ಹೃದಯ ಖಾಯಿಲೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೊಳಗಾಗುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಹೃದಯ ಖಾಯಿಲೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಜೀವ ಉಳಿಸಬಹುದು.
ಸಾಮಾನ್ಯವಾಗಿ ಹೃದಯ ತಪಾಸಣೆಗೆ ಸಾಕಷ್ಟು ವೈದ್ಯಕೀಯ ಪರೀಕ್ಷಾ ವಿಧಾನಗಳಿವೆ. ಆದರೆ ಅವೆಲ್ಲವೂ ದುಬಾರಿ. ಹೀಗಾಗಿ ಮನೆಯಲ್ಲಿಯೇ ಇದ್ದುಕೊಂಡೂ ನಾವು ಹೃದಯ ತಪಾಸಣೆ ಮಾಡಬಹುದು. ಅದುವೇ ಮೆಟ್ಟಿಲುಗಳನ್ನು ಹತ್ತುವ ಮೂಲಕ.
ಮೆಟ್ಟಿಲು ಹತ್ತುವಾಗ ನಮಗೆ ಸುಸ್ತಾಗುವುದು ಸಾಮಾನ್ಯ. ಆದರೆ ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ ಮೆಟ್ಟಿಲುಗಳನ್ನು ಹತ್ತುವಾಗ ಎದೆ ಉರಿ ಅಥವಾ ನೋವು ಕಂಡುಬಂದರೆ ಹೃದಯದ ಸಮಸ್ಯೆಯಿದೆ ಎಂದು ಅರ್ಥ ಎಂದು ಅವರು ಹೇಳಿದ್ದಾರೆ. ಕೆಲವರಿಗೆ ಮಲಗಿದಾಗ ಎದೆ ನೋವು, ಎದೆ ಉರಿ ಇರುತ್ತದೆ. ಆದರೆ ನಡೆಯುವಾಗ ಆರಾಮವಾಗಿ ಇರುತ್ತಾರೆ ಎಂದರೆ ಅದು ಹೃದಯದ ಸಮಸ್ಯೆಯಲ್ಲ ಎಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದರು.