ಇಂದಿನ ದಿನಗಳಲ್ಲಿ ಬಿಪಿ, ಶುಗರ್, ಹೃದಯದ ಖಾಯಿಲೆಗಳು ಸಾಮಾನ್ಯವಾಗಿಬಿಟ್ಟಿದೆ. ಯಾರಿಗೆ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದವೊಂದರಲ್ಲಿ ಹೀಗೆ ಹೇಳಿದ್ದರು.
ಮೇಲೆ ಹೇಳಿದ ಮೂರೂ ಖಾಯಿಲೆಗಳಿಗೆ ಕಾರಣ ನಮ್ಮ ಜೀವನ ಶೈಲಿ. ಇತ್ತೀಚೆಗಿನ ದಿನಗಳಲ್ಲಿ ಅಶಿಸ್ತಿನ ಜೀವನ ಶೈಲಿಯಿಂದಲೇ ಖಾಯಿಲೆಗಳು ಹೆಚ್ಚಾಗುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಅದರಲ್ಲೂ ರಕ್ತೊದತ್ತಡ ಸಮಸ್ಯೆ, ಮಧುಮೇಹ ಸಾಮಾನ್ಯವಾಗುತ್ತಿದೆ.
ಕೆಲವರು ಅತಿಯಾದ ಕೆಲಸದಿಂದಲೇ ಖಾಯಿಲೆಗಳು ಶುರುವಾಗುತ್ತದೆ ಎಂದುಕೊಂಡಿದ್ದಾರೆ. ಆದರೆ ಕೆಲಸ ಮಾಡುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಆದರೆ ನಾವು ಮಾಡುವ ಕೆಲಸವನ್ನು ನಾವು ಎಷ್ಟು ಖುಷಿಯಿಂದ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎನ್ನುವುದು ಡಾ ಸಿಎನ್ ಮಂಜುನಾಥ್ ಅಭಿಪ್ರಾಯವಾಗಿದೆ.
ದಿನಕ್ಕೆ ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎನ್ನುವುದಲ್ಲ. ಮಾಡುವ ಕೆಲಸದಲ್ಲಿ ನಮಗೆ ನೆಮ್ಮದಿ ಇರಬೇಕು. ಒತ್ತಡದಲ್ಲಿ ಕೆಲಸ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಇದರಿಂದ ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು ಬರಬಹುದು. ಕ್ರಮೇಣ ಇದುವೇ ಹೃದಯ ಸಂಬಂಧೀ ಸಮಸ್ಯೆಗೂ ಕಾರಣವಾಗಬಹುದು. ಎಲ್ಲರಿಗೂ ಗೊತ್ತಿರುವ ಹಾಗೆ ಹೃದಯ ಖಾಯಿಲೆಗೆ ಒತ್ತಡವೂ ಕಾರಣವಾಗಿರುತ್ತದೆ. ಹೀಗಾಗಿ ನಾವು ಎಷ್ಟೇ ಹೊತ್ತು ಕೆಲಸ ಮಾಡಲಿ, ಮಾಡುವ ಕೆಲಸವನ್ನು ಒತ್ತಡವಿಲ್ಲದೇ ಮಾಡಿದರೆ ರೋಗ ಬಾರದು ಎನ್ನುವುದು ಅವರ ಅಭಿಪ್ರಾಯವಾಗಿದೆ.