ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ ಕೃತಿಕಾ ರೆಡ್ಡಿ ಸಾವಿನ ನಂತರ ಪತಿ ಡಾ ಮಹೇಂದ್ರ ರೆಡ್ಡಿ ತನ್ನ ಕೃತ್ಯ ಬಯಲಾಗಬಾರದು ಎಂದು ಪೋಸ್ಟ್ ಮಾರ್ಟಂ ಮಾಡದಂತೆ ಯಾವೆಲ್ಲಾ ನಾಟಕವಾಡಿದ್ದ ಎಂಬುದು ಈಗ ಬಯಲಾಗಿದೆ.
ಮದುವೆಯಾದ 11 ತಿಂಗಳಲ್ಲೇ ಪತಿ ಮಹೇಂದ್ರ ರೆಡ್ಡಿ ಪತ್ನಿ ಕೃತಿಕಾಗೆ ಹೈ ಡೋಸ್ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿದ್ದ. ಆಕೆಗೆ ಹುಷಾರಿರಲಿಲ್ಲ. ಹೀಗಾಗಿ ಸಾವನ್ನಪ್ಪಿದ್ದಾಳೆ ಎಂದೇ ನಂಬಿಸಿದ್ದ. ಕೃತಿಕಾ ತವರು ಮನೆಯವರೂ ಇದನ್ನು ನಂಬಿದ್ದರು.
ಆದರೆ ಪೊಲೀಸರಿಗೆ ಆಗಲೇ ಕೊಂಚ ಅನುಮಾನ ಬಂದಿತ್ತು. ಹೀಗಾಗಿ ಪೋಸ್ಟ್ ಮಾರ್ಟಂ ಮಾಡಬೇಕು ಎಂದಾಗ ಮಹೇಂದ್ರ ಬೇಡ ಎಂದು ನಾಟಕವಾಡಿದ್ದ. ನನ್ನ ಪತ್ನಿಯ ದೇಹ ಕುಯ್ಯುವುದನ್ನು ನೋಡಲು ನನ್ನಿಂದ ಆಗದು. ಹಾಗಾಗಿ ಪೋಸ್ಟ್ ಮಾರ್ಟಂ ಮಾಡಬೇಡಿ ಎಂದಿದ್ದ. ನಂತರ ಪೊಲೀಸರು ಮನವೊಲಿಸಿ ಪೋಸ್ಟ್ ಮಾರ್ಟಂ ಮಾಡಲು ಮುಂದಾದಾಗ ಆ ಸಂದರ್ಭದಲ್ಲಿ ನಾನೂ ಅಲ್ಲಿರಬೇಕು ಎಂದು ಹಠ ಹಿಡಿದಿದ್ದ.
ಗೋಮುಖ ವ್ಯಾಘ್ರ ಅಳಿಯನ ಹುನ್ನಾರ ಗೊತ್ತಿಲ್ಲದೇ ಮಗಳ ಸಾವಿನ ಬಗ್ಗೆ ಪೋಷಕರೂ ದೂರು ನೀಡಲಿಲ್ಲ. ಆದರೆ ಅಲ್ಲಿದ್ದ ಇಂಜೆಕ್ಷನ್, ಔಷದಿ ಬಾಟಲಿಗಳನ್ನು ಪೊಲೀಸರು ಅನುಮಾನದ ಮೇರೆಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೊಳಪಡಿಸಿದ್ದರು. ಇದೀಗ ಎಫ್ಎಸ್ಎಲ್ ವರದಿಯಲ್ಲಿ ಆಕೆಗೆ ಅನಸ್ತೇಷಿಯಾ ಓವರ್ ಡೋಸ್ ಆಗಿದ್ದರಿಂದಲೇ ಸಾವಾಗಿತ್ತು ಎನ್ನುವುದು ಬಯಲಾದಾಗ ಪೊಲೀಸರಿಗೆ ಇದು ಕೊಲೆ ಎಂಬುದು ಖಚಿತವಾಗಿತ್ತು. ಹೀಗಾಗಿ ಪತ್ನಿಯ ಕೊಲೆ ಮಾಡಿ ಕಳೆದ ಆರು ತಿಂಗಳಿನಿಂದ ಹಾಯಾಗಿದ್ದ ಪತಿ ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.