ಬೆಂಗಳೂರು: ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬೆನ್ನಲ್ಲೇ ಹೃದ್ರೋಗ ತಜ್ಞ, ಬಿಜೆಪಿ ಸಂಸದ ಡಾ ಸಿ ಮಂಜುನಾಥ್ ಇದೊಂದು ಲಕ್ಷಣವಿದ್ದರೆ ಜನರು ಉದಾಸೀನ ಮಾಡದೇ ತಕ್ಷಣವೇ ಹೃದ್ರೋಗ ತಜ್ಞರನ್ನು ಭೇಟಿ ಮಾಡಬೇಕು ಎಂದಿದ್ದಾರೆ.
ಕೆಲವರು ಎದೆ ಉರಿ, ಹೊಟ್ಟೆ ಉರಿ ಆದ ತಕ್ಷಣ ಅದು ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ಇಂದಿನ ಕಾಲದಲ್ಲಿ ಎದೆ ಉರಿ, ಹೊಟ್ಟೆ ಉರಿ ಎಂದರೆ ಕೇವಲ ಗ್ಯಾಸ್ಟ್ರಿಕ್ ಮಾತ್ರವಲ್ಲ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯ ಲಕ್ಷಣವೂ ಆಗಿರಬಹುದು.
ಈ ರೀತಿ ಆದ ತಕ್ಷಣ ಅಂದರೆ ಅರ್ಧಗಂಟೆಯೊಳಗೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಇದು ಗೋಲ್ಡನ್ ಅವರ್ ಆಗಿದ್ದು ಉದಾಸೀನ ಮಾಡದೇ ಚಿಕಿತ್ಸೆ ಪಡೆದುಕೊಳ್ಳಬೇಕು.
ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಇದುವೇ. ಎದೆ ಉರಿ ಬಂದ ತಕ್ಷಣ ಗ್ಯಾಸ್ಟ್ರಿಕ್ ಎಂದು ಮನೆಯಲ್ಲಿಯೇ ಮದ್ದು ಮಾಡಿಕೊಂಡು ನಿರ್ಲ್ಯಕ್ಷ ಮಾಡುತ್ತಾರೆ. ಆದರೆ ಈ ರೀತಿ ಮಾಡದೇ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದಲ್ಲಿ ನಿಮ್ಮ ಜೀವ ಉಳಿಸಬಹುದು. ಕೇವಲ ಅಸಿಡಿಟಿಯಾಗಿದ್ದಲ್ಲಿ ಒಳ್ಳೆಯದೇ ಆಯಿತಲ್ವೇ? ಒಂದು ವೇಳೆ ಹೃದಯಾಘಾತದ ಮುನ್ಸೂನಚೆಯಾಗಿದ್ದರೆ ನಿಮ್ಮ ಪ್ರಾಣ ಉಳಿಸಬಹುದಲ್ವೇ? ಹೀಗಾಗಿ ಖಂಡಿತಾ ಅಸಡ್ಡೆ ಮಾಡಬೇಡಿ.