Publish Date: Wed, 18 Jun 2025 (10:34 IST)
Updated Date: Wed, 18 Jun 2025 (10:39 IST)
ಒಬ್ಬ ವ್ಯಕ್ತಿ ಸಾವಿಗೆ ಸಮೀಪವಾದಾಗ ಆತನ ವರ್ತನೆಯೇ ಬದಲಾಗುತ್ತದೆ. ಸಾವು ಅನಿರೀಕ್ಷಿತವೇ. ಆದರೂ ಕೆಲವೊಮ್ಮೆ ಅನಾರೋಗ್ಯ ಪೀಡಿತರಾಗಿದ್ದಾಗ ಅಥವಾ ಇನ್ನೇನು ಅಪಘಾತವಾಗಿ ಸಾಯಲಿದ್ದೇನೆ ಎನ್ನುವಾಗ ಆತನ ತಲೆಯಲ್ಲಿ ಬರುವ ಯೋಚನೆಗಳೇನು ಗೊತ್ತಾ?
ಸಾವನ್ನು ಯಾರೂ ಬಯಸುವುದಿಲ್ಲ. ಆದರೆ ಅದು ಅನಿವಾರ್ಯ. ಬಂದಾಗ ಅದನ್ನು ಅನಿವಾರ್ಯವಾಗಿ ಸ್ವೀಕರಿಸಲೇಬೇಕಾಗುತ್ತದೆ. ಸಾವು ಎನ್ನುವ ಶಬ್ಧವೇ ಮನುಷ್ಯನಲ್ಲಿ ಭಯ ಮೂಡಿಸುತ್ತದೆ. ಒಂದು ವೇಳೆ ಮನುಷ್ಯ ಇನ್ನು ತನ್ನ ಆಯಸ್ಸು ಕೆಲವೇ ಕ್ಷಣ ಎಂದು ಗೊತ್ತಾದಾಗ ಮೊದಲು ಆತ ಅದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಾನೆ. ಅದು ಸಾಧ್ಯವಾಗದೇ ಇದ್ದಲ್ಲಿ ಆತನ ತಲೆಯಲ್ಲಿ ಈ ಕೆಳಗಿನ ಕೆಲವೊಂದು ಯೋಚನೆಗಳು ಬರಬಹುದು.
ಪ್ರೀತಿ ಪಾತ್ರರ ಬಗ್ಗೆ
ಮನುಷ್ಯ ಅತಿಯಾಗಿ ವ್ಯಾಮೋಹವಿಟ್ಟುಕೊಂಡಿರುವುದು ತನ್ನ ಪ್ರೀತಿ ಪಾತ್ರರ ಬಗ್ಗೆ. ಮಕ್ಕಳು, ಸಂಗಾತಿ, ಅಪ್ಪ-ಅಮ್ಮ ಹೀಗೆ ಪ್ರೀತಿ ಪಾತ್ರರ ಬದುಕು ಮುಂದೆ ಹೇಗಿರಬಹುದು ಎಂದು ಆತ ಯೋಚನೆಗೊಳಗಾಗಬಹುದು.
ಕರ್ಮ ಫಲಗಳ ಬಗ್ಗೆ ಚಿಂತೆ
ತಾನು ಜೀವನದಲ್ಲಿ ಮಾಡಿದ ಕರ್ಮ ಫಲಗಳ ಬಗ್ಗೆ ಪಶ್ಚಾತ್ತಾಪ ಪಡಲು ಶುರು ಮಾಡುತ್ತಾನೆ. ಯಾರಿಗಾದರೂ ನೋವು ಮಾಡಿದ್ದಲ್ಲಿ, ಪಾಪ ಕೃತ್ಯ ಮಾಡಿದ್ದಲ್ಲಿ ಅದು ಆತನನ್ನು ಕಾಡಲು ಶುರು ಮಾಡುತ್ತದೆ.
ತನ್ನ ಪೂರ್ವಜರ ಬಗ್ಗೆ
ಹಳೆಯ ಸಂಬಂಧಗಳು, ಪೂರ್ವಜರ ಬಗ್ಗೆ ಆತನಲ್ಲಿ ಯೋಚನೆಗಳು ಬರುತ್ತವೆ. ಬಿಟ್ಟು ಹೋದ ಸಂಬಂಧಗಳನ್ನು ನೆನಪಿಸಿಕೊಳ್ಳಲು ಆರಂಭಿಸುತ್ತಾನೆ. ತನ್ನ ಸಾವಿನ ಬಳಿಕ ತನ್ನ ಮನೆಯವರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂದೂ ಯೋಚಿಸಲು ಪ್ರಾರಂಭಿಸುತ್ತಾನೆ.
ಕೃತಜ್ಞತೆ
ತನ್ನ ಜೀವನದಲ್ಲಿ ನೆರವಾದ ವ್ಯಕ್ತಿಗಳ ಬಗ್ಗೆ ನೆನೆಯುತ್ತಾನೆ. ನೆರವಾದವರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತಾನೆ. ಕೃತಜ್ಞತಾ ಭಾವದಿಂದ ನೋಡುತ್ತಾನೆ. ಆದರೆ ಎಲ್ಲವನ್ನೂ ಮೌನವಾಗಿ ಅನುಭವಿಸುತ್ತಾನೆ.