ಬೆಂಗಳೂರು: ಇತ್ತೀಚೆಗೆ ಹಾಸನದಲ್ಲಿ ಸರಣಿ ಹೃದಯಾಘಾತವಾಗುತ್ತಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಇದೀಗ ಎಲ್ಲರೂ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ದಾರಿ ಯಾವುದು ಹುಡುಕಾಡುತ್ತಿದ್ದಾರೆ. ಹೃದಯದ ಆರೋಗ್ಯಕ್ಕಾಗಿ ಈ ಒಂದು ಉಸಿರಾಟದ ವ್ಯಾಯಾಮ ಮಾಡಿದರೆ ಉತ್ತಮ.
ಹೃದಯ ಚೆನ್ನಾಗಿರಬೇಕು ಎಂದರೆ ಮಾನಸಿಕವಾಗಿ ಒತ್ತಡ, ಟೆನ್ಷನ್ ಇರಬಾರದು. ಆದಷ್ಟು ನಮ್ಮನ್ನು ನಾವು ಖುಷಿಯಾಗಿದ್ದುಕೊಂಡು, ಮನಸ್ಸನ್ನು ಶಾಂತಗೊಳಿಸಿದರೆ ಹೃದಯವೂ ಚೆನ್ನಾಗಿರುತ್ತದೆ. ಇದಕ್ಕಾಗಿ ಸರಳವಾಗಿ ಒಂದು ಉಸಿರಾಟದ ವ್ಯಾಯಾಮ ಮಾಡಬಹುದು.
ಯೋಗಾಸನ ಮಾಡುವುದು, ದೈಹಿಕ ಕಸರತ್ತು ಮಾಡುವುದು ಕಷ್ಟವೆನಿಸಿದರೆ ಸರಳವಾಗಿ ಉಸಿರಾಟದ ವ್ಯಾಯಾಮ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚೇನೂ ಶ್ರಮ ಪಡಬೇಕಾಗಿಲ್ಲ. ಸಮಯವೂ ಕಡಿಮೆ ಸಾಕು.
-ಪದ್ಮಾಸನ ಹಾಕಿಕೊಂಡು ಒಂದು ಶಾಂತ ಪರಿಸರದಲ್ಲಿ ಕುಳಿತುಕೊಳ್ಳಿ.
-ಈಗ ಮನಸ್ಸು ಮತ್ತು ದೇಹವನ್ನು ಶಾಂತವಾಗಿಟ್ಟುಕೊಳ್ಳಿ.
-ಬಳಿಕ ಒಂದು, ಎರಡು ಎಂದು ನಾಲ್ಕವರೆಗೆ ಮನಸ್ಸಿನಲ್ಲೇ ಎಣಿಕೆ ಮಾಡುತ್ತಾ ಒಂದು ದೀರ್ಘ ಶ್ವಾಸ ತೆಗೆದುಕೊಳ್ಳಿ.
-ಈಗ ಉಸಿರನ್ನು ಬಿಗಿಹಿಡಿದು ಒಂದರಿಂದ ನಾಲ್ಕರವರೆಗೆ ಮತ್ತೆ ಎಣಿಕೆ ಮಾಡಿ.
-ಮತ್ತೆ ಒಂದರಿಂದ ನಾಲ್ಕರವರೆಗೆ ಎಣಿಕೆ ಮಾಡುತ್ತಾ ಉಸಿರನ್ನು ನಿಧಾನವಾಗಿ ಬಿಡಿ.
-ಇದೇ ರೀತಿ ದಿನಕ್ಕೆ ಎರಡು ಬಾರಿ ಮಾಡುತ್ತಿದ್ದರೆ ನಿಮ್ಮ ಹೃದಯಕ್ಕೂ ಉತ್ತಮ ವ್ಯಾಯಾಮ ಸಿಕ್ಕಂತಾಗುತ್ತದೆ. ಹೃದಯದ ರಕ್ತನಾಳಗಳೂ ಸರಾಗವಾಗುತ್ತದೆ.