ಮುಂಬೈ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಫಿಟ್ನೆಸ್ ಬಗ್ಗೆ ಹೊರಗೊಂದು ಒಳಗೊಂದು ಹೇಳುತ್ತಿದ್ದಾರಾ? ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ ಇದು ನಿಜವೆನಿಸುತ್ತದೆ.
ತಾನು ಫಿಟ್ ಆಗಿದ್ದರೂ ಟೀಂ ಇಂಡಿಯಾಕ್ಕೆ ತನ್ನನ್ನು ಪರಿಗಣಿಸುತ್ತಿಲ್ಲ ಎಂಬ ಮೊಹಮ್ಮದ್ ಶಮಿ ಆರೋಪಗಳೆಲ್ಲಾ ಸುಳ್ಳು ಎಂದು ಬಿಸಿಸಿಐ ಮೂಲಗಳೇ ಹೇಳಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಶಮಿಯನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯೂ ಉತ್ಸುಕವಾಗಿದೆ. ಆದರೆ ಶಮಿಯೇ ತಾವು ಇನ್ನೂ ಅಷ್ಟೊಂದು ವರ್ಕ್ ಲೋಡ್ ಹೊರುವಷ್ಟು ಫಿಟ್ ಆಗಿಲ್ಲ ಎಂದಿದ್ದರಿಂದ ಅವರನ್ನು ಪರಿಗಣಿಸಿರಲಿಲ್ಲ. ಜಸ್ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನೂ ಆಡಲು ಸಾಧ್ಯವಿಲ್ಲ. ಹೀಗಿರುವಾಗ ಶಮಿಯಂತಹ ಬೌಲರ್ ಆಯ್ಕೆ ಲಭ್ಯರಿದ್ದರೂ ಯಾರು ಬೇಡ ಎನ್ನುತ್ತಾರೆ. ಶಮಿ ಮಾಧ್ಯಮಗಳ ಮುಂದೆ ಅರ್ಧ ಸತ್ಯವನ್ನಷ್ಟೇ ಹೇಳುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಶಮಿ ಲಭ್ಯತೆ ಬಗ್ಗೆ ಹಲವು ಬಾರಿ ಆಯ್ಕೆದಾರರು ಫೋನ್ ಕರೆ ಮಾಡಿ ತಿಳಿದುಕೊಂಡಿದ್ದಾರೆ. ಅವರ ವೈದ್ಯಕೀಯ ವರದಿಯೂ ನಮ್ಮ ಬಳಿಯಿದೆ. ಹೀಗಾಗಿ ಅರ್ಧಸತ್ಯವನ್ನು ಶಮಿ ಹೇಳುತ್ತಿದ್ದಾರೆ. ಅವರ ದೇಹ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಸಿದ್ಧವಿದೆ ಎಂದಾಗ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ.