ಮುಂಬೈ: ಗೆಳೆತನ ಎಂದರೆ ಹೇಗಿರಬೇಕು ಎಂಬುದನ್ನು ಜೆಮಿಮಾ ರೊಡ್ರಿಗಸ್ ನೋಡಿಯೇ ತಿಳಿಯಬೇಕು. ಸ್ಮೃತಿ ಮಂಧಾನ ಕಷ್ಟದಲ್ಲಿದ್ದಾರೆಂದು ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಜೆಮಿಮಾ.
ಕ್ರಿಕೆಟ್ ನಲ್ಲಿ ಗೆಳೆತನ ಏನೇ ಇದ್ದರೂ ಮೈದಾನದ ಮಟ್ಟಿಗೆ, ಪಾರ್ಟಿಗಳಲ್ಲಿ ಸುತ್ತಾಡುವ ಮಟ್ಟಿಗೆ ಸೀಮಿತ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಜೆಮಿಮಾ-ಸ್ಮೃತಿ ಗೆಳೆತನ ಅದಕ್ಕೂ ಮೀರಿದ್ದು ಎಂಬುದು ಈಗ ಸಾಬೀತಾಗಿದೆ.
ತಂದೆಗೆ ಹೃದಯಾಘಾತವಾಗಿದ್ದರಿಂದ ಪಾಲಾಶ್ ಮುಚ್ಚಲ್ ಜೊತೆಗಿನ ಸ್ಮೃತಿ ಮಂಧಾನ ಮದುವೆ ನಿಂತು ಹೋಗಿದೆ. ಇದರ ನಡುವೆ ಪಾಲಾಶ್ ಕೂಡಾ ಒತ್ತಡ, ಅಸಿಡಿಟಿಯಿಂದ ಆಸ್ಪತ್ರೆ ಸೇರಿದ್ದರು. ಜೊತೆಗೆ ಪಾಲಾಶ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಂಚನೆ ಮಾಡಿದ ಆರೋಪಗಳೂ ಬಂದಿದ್ದವು.
ಹೀಗಾಗಿ ಸ್ಮೃತಿ ಮಂಧಾನ ವೈಯಕ್ತಿಕ ಜೀವದಲ್ಲಿ ಭಾರೀ ಕೋಲಾಹಲವೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗೆಳತಿಯ ಜೊತೆಗಿರಲು ಜೆಮಿಮಾ ವಿದೇಶೀ ಕ್ರಿಕೆಟ್ ಲೀಗ್ ಡಬ್ಲ್ಯುಬಿಬಿಎಲ್ ನಿಂದಲೇ ಹೊರ ನಡೆದಿದ್ದಾರೆ. ಗೆಳತಿ ಸ್ಮೃತಿ ಮಂಧಾನಗೆ ಬೆಂಬಲವಾಗಿ ನಿಲ್ಲಲು ಬಿಗ್ ಬಾಶ್ ಕ್ರಿಕೆಟ್ ಲೀಗ್ ನಿಂದ ಹಿಂದೆ ಸರಿಯುವುದಾಗಿ ಅವರು ಪತ್ರ ಬರೆದಿದ್ದಾರಂತೆ.
ಈ ಹಿಂದೆ ಜೆಮಿಮಾ ವೈಯಕ್ತಿಕವಾಗಿ ಒತ್ತಡ, ಖಿನ್ನತೆಗೊಳಗಾಗಿದ್ದಾಗ ಬೆಂಬಲವಾಗಿ ನಿಂತಿದ್ದು ಸ್ಮೃತಿ ಎಂಬುದನ್ನು ಅವರೇ ಹೇಳಿಕೊಂಡಿದ್ದರು. ನಾನು ನೆಟ್ಸ್ ನಲ್ಲಿ ಅಭ್ಯಾಸ ನಡೆಸುವಾಗ ನನಗೆ ಬೆಂಬಲಿಸಲು ಅವಳು ನನಗಾಗಿ ಅಲ್ಲಿ ನಿಂತಿರುತ್ತಿದ್ದಳು ಎಂದು ಜೆಮಿಮಾ ಹೇಳಿಕೊಂಡಿದ್ದರು. ಇದೀಗ ಜೆಮಿಮಾ ಸರದಿ. ಸ್ಮೃತಿ ಜೀವನದಲ್ಲಿ ಸಂಕಷ್ಟಗಳು ಎದುರಾಗಿರುವಾಗ ಬಿಗ್ ಬಾಶ್ ನಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾಕ್ಕೆ ತೆರಳಲು ಸಾಧ್ಯವಿಲ್ಲವೆಂದು ಗೆಳತಿಗೆ ಬೆಂಬಲವಾಗಿ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಜೆಮಿಮಾ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.