ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಗೆ ವಿಶ್ವಕಪ್ ಗೆದ್ದ ಡಿವೈ ಪಾಟೀಲ್ ಮೈದಾನದಲ್ಲೇ ಭಾವೀ ಪತಿ ಪಾಲಾಶ್ ಮುಚ್ಚಲ್ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ.
ಈ ವಿಡಿಯೋಗಳನ್ನು ಪಾಲಾಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಮೃತಿ ಕೆಲವೇ ದಿನಗಳ ಹಿಂದೆ ಇದೇ ಡಿವೈ ಪಾಟೀಲ್ ಮೈದಾನದಲ್ಲಿ ಏಕದಿನ ವಿಶ್ವಕಪ್ ಫೈನಲ್ ಗೆಲುವಿನ ಸಂಭ್ರಮಾಚರಣೆ ನಡೆಸಿದ್ದರು.
ಇದೀಗ ಅದೇ ಮೈದಾನಕ್ಕೆ ಸ್ಮೃತಿಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಬಂದ ಪಾಲಾಶ್ ಸಿನಿಮೀಯ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾರೆ. ಮೈದಾನದ ಮಧ್ಯಭಾಗಕ್ಕೆ ಕೈಹಿಡಿದು ಸ್ಮೃತಿಯನ್ನು ಕರೆತಂದ ಪಾಲಾಶ್ ಮಂಡಿಯೂರಿ ನನ್ನ ಮದುವೆಯಾಗುತ್ತೀಯಾ ಎಂದು ಕೇಳಿದ್ದಾರೆ. ಸ್ಮೃತಿ ಯೆಸ್ ಎಂದು ಹೇಳುತ್ತಿದ್ದಂತೇ ಪರಸ್ಪರ ಉಂಗುರ ತೊಡಿಸಿಕೊಂಡು ತಬ್ಬಿಕೊಂಡು ಸಂಭ್ರಮಿಸಿದ್ದಾರೆ. ಈ ವೇಳೆ ಅವರ ಆಪ್ತರೂ ಜೊತೆಯಾಗಿದ್ದಾರೆ.
ಸ್ಮೃತಿ-ಪಾಲಾಶ್ ಈ ಪ್ರಪೋಸ್ ವಿಡಿಯೋ ನೋಡುತ್ತಿದ್ದಂತೇ ಅನೇಕ ಸಿಂಗಲ್ಸ್ ಹುಡುಗರ ಹೃದಯ ಭಗ್ನವಾಗಿದೆ. ಇನ್ನು ಕೆಲವರು, ಅಬ್ಬಾ ಎಷ್ಟು ಅದ್ಭುತವಾಗಿ ಪ್ರಪೋಸ್ ಮಾಡಿದ್ದೀರಿ ಎಂದು ಪಾಲಾಶ್ ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಂದ ಹಾಗೆ ಇಬ್ಬರೂ ನವಂಬರ್ 23 ರಂದು ಮದುವೆಯಾಗುತ್ತಿದ್ದಾರೆ.