ಮುಂಬೈ: ಮಹಿಳೆಯರ ಏಕದಿನ ವಿಶ್ವಕಪ್ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡದ ವನಿತೆಯರು ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಜ್ಜಾಗುತ್ತಿದ್ದಾರೆ. ಈ ಬಾರಿ ಅವಧಿಗಿಂತ ಬೇಗ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ.
ಕಳೆದ ವರ್ಷ ಟೂರ್ನಿಯನ್ನು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಮಾಡಲಾಗಿತ್ತು. ಆದರೆ ಈ ಬಾರಿ ಫೆಬ್ರವರಿ ದ್ವಿತೀಯ ವಾರದಲ್ಲಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಪಂದ್ಯಾವಳಿ ಭಾರತಲ್ಲಿ ನಡೆಯಲಿದೆ. ಹೀಗಾಗಿ ಜನವರಿಯಲ್ಲೇ ಮಹಿಳಾ ಪ್ರೀಮಿಯರ್ ಲೀಗ್ ಆರಂಭಿಸಲು ನಿರ್ಧರಿಸಲಾಗಿದೆ.
ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಜನವರಿ 7ರಿಂದ ಫೆಬ್ರವರಿ 3 ರವರೆಗೆ ಮುಂಬೈ ಮತ್ತು ಬರೋಡಾದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆಟಗಾರ್ತಿಯ ಹರಾಜು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ. ಉದ್ಘಾಟನ ಪಂದ್ಯ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಪಂದ್ಯಗಳ ಸ್ಥಳಗಳ ಕುರಿತು ಅನೌಪಚಾರಿಕ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ನವೆಂಬರ್ 27 ರಂದು ನವದೆಹಲಿಯಲ್ಲಿ ನಡೆಯಲಿರುವ ಆಟಗಾರ್ತಿಯರ ಹರಾಜಿಗೆ ಮುಂಚೆ ಐದು ತಂಡಗಳಿಗೆ ಸ್ಥಳಗಳ ಕುರಿತು ಅಂತಿಮಗೊಳಿಸುವ ನಿರೀಕ್ಷೆಯಿದೆ.
ಮುಂಬೈ ಮತ್ತು ಬರೋಡಾ ಜತೆ ಬೆಂಗಳೂರು ಹಾಗೂ ಲಖನೌ ಕೂಡ ಟೂರ್ನಿ ಆಯೋಜಿಸಲು ಪೈಪೋಟಿಯಲ್ಲಿದ್ದವು. ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವುದು ಅನುಮಾನವಾಗಿದೆ. ಹೀಗಾಗಿ, ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಲಿದೆ.