ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗಾಯಗೊಂಡು ಭಾರತ ತಂಡದಿಂದ ಹೊರಬಿದ್ದ ಪ್ರತೀಕಾ ರಾವಲ್ ಅವರಿಗೆ ವಿಶ್ವಕಪ್ ವಿಜೇತ ಚಿನ್ನದ ಪದಕ ಸಿಗಲು ಐಸಿಸಿ ಅಧ್ಯಕ್ಷ ಜಯ್‌ಶಾ ಅವರ ಕೃಪೆಯೇ ಕಾರಣ.
ಐಸಿಸಿ ನಿಯಮಗಳ ಪ್ರಕಾರ ತಂಡದ 15 ಆಟಗಾರ್ತಿಯರು ಮಾತ್ರ ವಿಶ್ವಕಪ್ ಪದಕವನ್ನು ಪಡೆಯುತ್ತಾರೆ. ವಿಶ್ವಕಪ್ ಗೆಲುವಿನಲ್ಲಿ ಪ್ರತೀಕಾ ಪಾತ್ರವಿದ್ದರೂ ಫೈನಲ್‌ನಲ್ಲಿ ಭಾಗಿಯಾಗದ ಕಾರಣ ಪದಕ ಸಿಕ್ಕಿರಲಿಲ್ಲ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಆರಂಭಿಕ ಆಟಗಾರ್ತಿ ಪ್ರತೀಕಾ ಅವರು ಪ್ಲೇ ಆಫ್ ಪಂದ್ಯಗಳಿಂದ ಹೊರಬಿದ್ದಿದ್ದರು. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಿರದ ಕಾರಣ ಪ್ರತೀಕಾ ರಾವಲ್ ಅವರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಸಿಕ್ಕಿರಲಿಲ್ಲ. ಆದರೆ, ಐಸಿಸಿ ಈಗ ಪ್ರತೀಕಾ ಗಾಯಗೊಂಡಿದ್ದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಚಿನ್ನದ ಪದಕ ನೀಡಿದೆ.
ಪ್ರತೀಕಾ ರಾವಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಪಂದ್ಯ ಮುಗಿದ ನಂತರ ನಮ್ಮ ತಂಡದ ಮ್ಯಾನೇಜರ್ ಅವರಿಗೆ ಜಯ್ ಶಾ ಸರ್ ಮೆಸೇಜ್ ಮಾಡಿ ಪ್ರತೀಕಾ ಅವರಿಗೆ ಪದಕ ನೀಡುವುದಾಗಿ ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಭೇಟಿಯಾಗುವ ಮೊದಲು ನನಗೆ ಪದಕ ಸಿಕ್ಕಿತ್ತು. ಅದನ್ನು ನಾನು ಧರಿಸಿದ್ದೆ ಎಂದು ತಿಳಿಸಿದರು.
2025ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರತೀಕಾ ರಾವಲ್ ಒಟ್ಟು 6 ಪಂದ್ಯಗಳನ್ನಾಡಿ 51.33 ಸರಾಸರಿಯಲ್ಲಿ 308 ರನ್ ಗಳಿಸಿದ್ದರು. ಬಾಂಗ್ಲಾದೇಶದ ವಿರುದ್ಧ ನವಿ ಮುಂಬೈನಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮೊಣಕಾಲಿನ ಸಮಸ್ಯೆಯಿಂದಾಗಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಶಫಾಲಿ ವರ್ಮಾ ತಂಡಕ್ಕೆ ಆಗಮಿಸಿದ್ದರು.