ನವಿ ಮುಂಬೈ: ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ಸೆಣಸಲಿವೆ.
ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಫೈನಲ್ ತಲುಪದ ಕಾರಣ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯರ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ.
ಉಭಯ ತಂಡಗಳು ತಮ್ಮ ಮೊದಲ ವಿಶ್ವ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. ಭಾರತ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಹಾಗೂ ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ.
45,300 ಪ್ರೇಕ್ಷಕರ ಸಾಮರ್ಥ್ಯದ ಡಿ.ವೈ. ಪಾಟೀಲ್ ಸ್ಟೇಡಿಯಂ ಪ್ರಸಕ್ತ ಪಂದ್ಯಾವಳಿಯ ವೇಳೆ ಭಾರತದ ಪಾಲಿಗೆ ಅದೃಷ್ಟದ ಮೈದಾನವಾಗಿತ್ತು. ಗ್ರೂಪ್ ಹಂತದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ದಾಖಲಿಸಿದ್ದ ಭಾರತವು ಸೆಮಿ ಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಸೋಲುಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ಉಭಯ ತಂಡಗಳು ತಂಡಗಳು ಅಕ್ಟೋಬರ್ 9ರಂದು ಪಂದ್ಯಾವಳಿಯ ಲೀಗ್ ಹಂತದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ದಕ್ಷಿಣ ಆಫ್ರಿಕಾವು 3 ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿತ್ತು. ನಾಡಿನ್ ಡಿ ಕ್ಲಾರ್ಕ್ ಔಟಾಗದೇ 84 ರನ್ ಹಾಗೂ 2 ವಿಕೆಟ್ ಗಳನ್ನು ಉರುಳಿಸುವ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು.
ಹೆಡ್-ಟು-ಹೆಡ್ ದಾಖಲೆಯಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೇಲುಗೈ ಹೊಂದಿದ್ದು, 34 ಏಕದಿನ ಪಂದ್ಯಗಳ ಪೈಕಿ 20ರಲ್ಲಿ ಜಯ ದಾಖಲಿಸಿದೆ.
ಭಾರತ ತಂಡವು ಈ ಹಿಂದೆ 2005 ಹಾಗೂ 2017ರಲ್ಲಿ ಫೈನಲ್ ಗೆ ತಲುಪಿತ್ತು. ಆದರೆ ಕ್ರಮವಾಗಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡಿತ್ತು. ಪ್ರತಿಷ್ಠಿತ ಪ್ರಶಸ್ತಿಗಾಗಿ ಇದೀಗ 3ನೇ ಬಾರಿ ಪ್ರಯತ್ನಿಸಲಿದೆ.
2017 ಹಾಗೂ 2022ರಲ್ಲಿ ಸೆಮಿ ಫೈನಲ್ ನಲ್ಲೇ ನಿರ್ಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಚರಿತ್ರೆ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.