ಮುಂಬೈ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಳೆ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಹೋದರೆ ಸೋಲ್ಡ್ ಔಟ್ ತೋರಿಸುತ್ತಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತ ತಂಡ ಫೈನಲ್ ಗೆ ಲಗ್ಗೆಯಿಟ್ಟಿರುವ ಕಾರಣ ನವಿ ಮುಂಬೈ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರೀ ಬೇಡಿಕೆ ಬಂದಿದೆ. ಸೆಮಿಫೈನಲ್ ಪಂದ್ಯಕ್ಕೇ ಸ್ಟೇಡಿಯಂ ಭರ್ತಿಯಾಗಿತ್ತು. ಇದೀಗ ಸೆಮಿಫೈನಲ್ ನಲ್ಲಿ ಮಹಿಳೆಯರ ಪ್ರದರ್ಶನ ನೋಡಿದ ಬಳಿಕ ಹಲವಾರು ಅಭಿಮಾನಿಗಳು ಮೈದಾನಕ್ಕೆ ಬರಲು ಉತ್ಸುಕರಾಗಿದ್ದಾರೆ.
ಆದರೆ ಇಷ್ಟು ದಿನ ಟಿಕೆಟ್ ಇನ್ನೂ ಬಿಟ್ಟಿಲ್ಲ ಎಂದು ತೋರಿಸುತ್ತಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಆನ್ ಲೈನ್ ನಲ್ಲಿ ಟಿಕೆಟ್ ಸೋಲ್ಡ್ ಔಟ್ ತೋರಿಸುತ್ತಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ದರೆ ಟಿಕೆಟ್ ಎಲ್ಲಿ ಹೋಯ್ತು? ಯಾವಾಗ ಮಾರಾಟ ಮಾಡಿದ್ರಿ ಎಂದು ಕಿಡಿ ಕಾರಿದ್ದಾರೆ.
ಮೂಲಗಳ ಪ್ರಕಾರ ಸ್ಟೇಡಿಯಂನ 1/3 ರಷ್ಟು ಪ್ರಾಯೋಜಕರೇ ಸೀಟ್ ಬುಕ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ಕೆಲವೇ ಸೀಟು ನೀಡಲಾಗಿದೆ. ಇನ್ನು ವಿಐಪಿ ಟಿಕೆಟ್ ನ್ನು 1 ಲಕ್ಷ ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ. ಮಹಿಳಾ ಕ್ರಿಕೆಟ್ ಪಂದ್ಯದ ಟಿಕೆಟ್ ಗೆ ಈ ಮಟ್ಟಿಗಿನ ಬೇಡಿಕೆ ಇದುವರೆಗೆ ಇರಲಿಲ್ಲ. ಆದರೆ ಈಗ ಮಹಿಳಾ ಕ್ರಿಕೆಟ್ ಗೂ ಈ ಮಟ್ಟಿಗೆ ಬೇಡಿಕೆ ಬಂದಿರುವುದಕ್ಕೆ ಖುಷಿಪಡಬೇಕೋ, ಸಾಮಾನ್ಯ ಜನರು ಟಿಕೆಟ್ ಗಾಗಿ ಕಷ್ಟಪಡಬೇಕಾಗಿರುವುದಕ್ಕೆ ದುಃಖ ಪಡಬೇಕೋ ಗೊತ್ತಾಗುತ್ತಿಲ್ಲ.