ಮುಂಬೈ: ಸಚಿನ್ ತೆಂಡುಲ್ಕರ್ ಗೆ ವಯಸ್ಸು 51 ಆದರೂ ಈ ವಯಸ್ಸಿನಲ್ಲಿ ಎಂಥಾ ಕ್ರೇಜ್. ಮಾಸ್ಟರ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಇಂಡಿಯನ್ ಲೆಜೆಂಡ್ಸ್ ಮತ್ತು ಇಂಗ್ಲೆಂಡ್ ಲೆಜೆಂಡ್ಸ್ ನಡುವಿನ ಪಂದ್ಯ ಇದಕ್ಕೆ ಸಾಕ್ಷಿಯಾಗಿದೆ.
ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿ ಇಷ್ಟು ವರ್ಷವಾದರೂ ಅವರನ್ನು ಆರಾಧಿಸುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಚಿನ್ ಎಂದರೆ ಕೇವಲ ಆಟಗಾರನಲ್ಲ, ಭಾವನೆ. ಅದಕ್ಕೇ ಅವರನ್ನು ಕ್ರಿಕೆಟ್ ದೇವರು ಎನ್ನುವುದು.
ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಭಾರತೀಯ ಮಾಸ್ಟರ್ಸ್ ತಂಡ 9 ವಿಕೆಟ್ ಗಳಿಂದ ಗೆದ್ದುಕೊಂಡಿತು. ಡಿವೈ ಪಾಟೀಲ್ ಮೈದಾನದಲ್ಲಿ ಈ ಪಂದ್ಯ ನಡೆದಿತ್ತು. ವಿಶೇಷವೆಂದರೆ ಈ ಪಂದ್ಯದಲ್ಲಿ ಸಚಿನ್, ಯುವರಾಜ್ ಸೇರಿದಂತೆ ಒಂದು ಕಾಲದ ಸೂಪರ್ ಸ್ಟಾರ್ ಆಟಗಾರರೆಲ್ಲರೂ ಭಾಗಿಯಾಗಿದ್ದರು.
ಇದು ಅಂತಾರಾಷ್ಟ್ರೀಯ ಪಂದ್ಯವಲ್ಲದೇ ಇದ್ದರೂ ಅಂತಾರಾಷ್ಟ್ರೀಯ ಪಂದ್ಯಕ್ಕಿಂತಲೂ ಹೆಚ್ಚು ಜನ ಸ್ಟೇಡಿಯಂನಲ್ಲಿ ಸೇರಿದ್ದರು. ಇವರೆಲ್ಲರೂ ಹಿಂದಿನಂತೇ ಸಚಿನ್..ಸಚಿನ್ ಎಂದು ಕೂಗಿ ಹೇಳುತ್ತಿದ್ದರು. ಈ ದೃಶ್ಯ ನೋಡಿದರೆ ಅರೆಕ್ಷಣ ಹಳೆಯ ಕಾಲದ ಸಚಿನ್ ಬ್ಯಾಟಿಂಗ್ ನೆನಪಾಯಿತು. ವಯಸ್ಸು 51 ಆದರೇನು, ಸಚಿನ್ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.