ನವದೆಹಲಿ: ದಬಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಪುಣೇರಿ ಪಲ್ಟನ್ ತಂಡವನ್ನು 31–28ರಿಂದ ಮಣಿಸಿ ಎರಡನೇ ಬಾರಿ ಪ್ರಶಸ್ತಿ ಗೆದ್ದಿತು.
ದಬಂಗ್ ಡೆಲ್ಲಿ ತಂಡವು ತವರಿನಂಗಳದಲ್ಲಿ ಪ್ರಶಸ್ತಿ ಗೆದ್ದ ಎರಡನೇ ತಂಡ ಎನಿಸಿತು. ಎರಡನೇ ಆವೃತ್ತಿಯಲ್ಲಿ (2014) ಯು ಮುಂಬಾ ತಂಡವು ಮೊದಲ ಬಾರಿ ತನ್ನ ತವರಿನಲ್ಲೇ ಚಾಂಪಿಯನ್ ಆಗಿತ್ತು.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಡೆಲ್ಲಿ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಮೊದಲಾರ್ಧದಲ್ಲಿ 6 ಅಂಕಗಳ (20–14)ಮುನ್ನಡೆ ಪಡೆದ ಡೆಲ್ಲಿ ತಂಡಕ್ಕೆ ಉತ್ತರಾರ್ಧದಲ್ಲಿ ಪುಣೇರಿ ಪ್ರಬಲ ಸ್ಪರ್ಧೆಯೊಡ್ಡಿತು. ಅಂತಿಮವಾಗಿ 2023ರ ಚಾಂಪಿಯನ್ ಪುಣೇರಿ ತಂಡವು 3 ಅಂಕಗಳಿಂದ ಸೋತಿತು.
ಡೆಲ್ಲಿ ತಂಡಕ್ಕೆ ಇದು ಎರಡನೇ ಪಿಕೆಎಲ್ ಪ್ರಶಸ್ತಿ. ತಂಡದ ಮುಖ್ಯ ಕೋಚ್ ಜೋಗಿಂದರ್ ನರ್ವಾಲ್ ಅವರು ನಾಯಕರಾಗಿದ್ದಾಗ ಎಂಟನೇ ಆವೃತ್ತಿಯಲ್ಲಿ (2021–22) ಮೊದಲ ಬಾರಿ ಕಿರೀಟ ಮುಡಿಗೇರಿಸಿಕೊಂಡಿತ್ತು.