ದುಬೈ: 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಬಾರಿಯ ಸಾಧಕ ಆಟಗಾರ್ತಿಯರನ್ನು ಒಳಗೊಂಡ 12 ಮಂದಿ ತಂಡವನ್ನು ಪ್ರಕಟಿಸಿದೆ. ಅಚ್ಚರಿಯೆಂದರೆ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಭಾನುವಾರ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಮಣಿಸಿ ಭಾರತ ಮಹಿಳಾ ತಂಡ ಮೊದಲ ಸಲ ಕಪ್ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಐಸಿಸಿ ಈ ಬಾರಿಯ ಸಾಧಕ ಆಟಗಾರರನ್ನೊಳಗೊಂಡ 12 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಮೂವರು ಭಾರತೀಯ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಲಾರಾ ವೋಲ್ವಾರ್ಟ್ ಅವರನ್ನು ನಾಯಕಿಯಾಗಿ ನೇಮಿಸಲಾಗಿದೆ. ಭಾರತದ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮೃತಿ ಮಂದಾನ, ಜೆಮಿಮಾ ರೊಡ್ರಿಗಸ್ ಮತ್ತು ದೀಪ್ತಿ ಶರ್ಮಾ ಸ್ಥಾನ ಪಡೆದ ಭಾರತೀಯ ಆಟಗಾರ್ತಿಯರು.
ಸ್ಮೃತಿ ಮಂಧಾನ ಮತ್ತು ಲಾರಾ ವೋಲ್ವಾರ್ಟ್ ಟೂರ್ನಮೆಂಟ್‌ನ ತಂಡದಲ್ಲಿ ಆರಂಭಿಕರಾಗಿ, ಜೆಮಿಮಾ ರೊಡ್ರಿಗಸ್ 3ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ವೋಲ್ವಾರ್ಡ್ 71.37 ರ ಅತ್ಯುತ್ತಮ ಸರಾಸರಿಯಲ್ಲಿ 571 ರನ್‌ಗಳೊಂದಿಗೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸತತ ಶತಕಗಳನ್ನು ದಾಖಲಿಸಿದ್ದಾರೆ. ಸ್ಮೃತಿ 54.25 ರ ಸರಾಸರಿಯಲ್ಲಿ 434 ರನ್‌ಗಳೊಂದಿಗೆ ವಿಶ್ವಕಪ್ ಅನ್ನು ಮುಗಿಸಿದರು.
ಸ್ಪಿನ್ ಆಲ್‌ರೌಂಡರ್ ಆಗಿ ದೀಪ್ತಿ ಶರ್ಮಾ, ಆಸ್ಟ್ರೇಲಿಯಾ ತಂಡದಿಂದ ಆಶ್ಲೆ ಗಾರ್ಡನರ್, ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಅಲಾನಾ ಕಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಸಿದ್ರಾ ನವಾಜ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್‌ನ ಅನುಭವಿ ಸ್ಪಿನರ್ ಸೋಫಿ ಎಕ್ಲೆಸ್ಟೋನ್ 12ನೇ ಆಟಗಾರ್ತಿಯಾಗಿದ್ದಾರೆ.
ಐಸಿಸಿ ತಂಡ ಹೀಗಿದೆ: ಲಾರಾ ವೋಲ್ವಾರ್ಟ್ (ದಕ್ಷಿಣ ಆಫ್ರಿಕಾ, ನಾಯಕಿ), ಸ್ಮೃತಿ ಮಂಧಾನ (ಭಾರತ), ಜೆಮಿಮಾ ರಾಡ್ರಿಗಸ್ (ಭಾರತ), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ), ಆಶ್ಲೆ ಗಾರ್ಡನರ್ (ಆಸ್ಟ್ರೇಲಿಯಾ), ದೀಪ್ತಿ ಶರ್ಮಾ (ಭಾರತ), ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ನಾಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ), ಸಿದ್ರಾ ನವಾಜ್ (ಪಾಕಿಸ್ತಾನ) (ವಿಕೆಟ್ ಕೀಪರ್), ಅಲಾನಾ ಕಿಂಗ್ (ಆಸ್ಟ್ರೇಲಿಯಾ).
12 ನೇ ಆಟಗಾರ್ತಿ: ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್).