ಮುಂಬೈ: ಇಂದು ಗೆಳೆಯ ಪಾಲಾಶ್ ಮುಚ್ಚಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ದಿಡೀರ್ ಮುಂದೂಡಿಕೆಯಾಗಿದೆ. ಕಾರಣ ಶಾಕಿಂಗ್ ಆಗಿದೆ.
ಮೊನ್ನೆಯಿಂದ ಸ್ಮೃತಿ ಮಂಧಾನ ಮದುವೆ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿತ್ತು. ಇಂದು ಸ್ಮೃತಿ-ಪಾಲಾಶ್ ಮದುವೆ ಮುಹೂರ್ತ ನಿಗದಿಯಾಗಿತ್ತು. ಸಾಕಷ್ಟು ಗಣ್ಯರು, ಕುಟುಂಬಸ್ಥರು ಮದುವೆ ಸಮಾರಂಭಕ್ಕೆ ಬಂದಿದ್ದರು.
ಆದರೆ ಇಂದು ಸ್ಮೃತಿ ತಂದೆ ಶ್ರೀನವಾಸ್ ಮಂಧಾನಗೆ ಹೃದಯಾಘಾತವಾಗಿದ್ದು ಈ ಕಾರಣಕ್ಕೆ ಮದುವೆ ದಿಡೀರ್ ಮುಂದೂಡಿಕೆಯಾಗಿದೆ. ಮದುವೆ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಸಂಭ್ರಮದಿಂದ ಮಗಳ ಮದುವೆ ನೋಡಬೇಕಿದ್ದ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರುವಂತಾಗಿದೆ. ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಈಗ ಆತಂಕದ ಛಾಯೆ ಮೂಡಿದೆ.