ಸಿಡ್ನಿ: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಅವರು ಕೊನೆಗೂ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ಸಿಡ್ನಿಯಲ್ಲಿ ಭಾನುವಾರ ನಡೆದ ಸೂಪರ್ 500 ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಲಕ್ಷ್ಯ ಸೇನ್ ವಿಶ್ವದ 14ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಯುಶಿ ತನಕಾ ಅವರನ್ನು 21–15, 21–11 ಅಂತರದಿಂದ ಸೋಲಿಸಿದರು.
ಮೊದಲ ಪಾಯಿಂಟ್‌ನಿಂದಲೂ ಚುರುಕಾಗಿ ಕಾಣುತ್ತಿದ್ದ ಲಕ್ಷ್ಯ ತನಗಿಂತ ಕೆಳ ಶ್ರೇಯಾಂಕದ ಎದುರಾಳಿಯನ್ನು ಸೋಲಿಸಲು ಕೇವಲ 38 ನಿಮಿಷಗಳನ್ನು ತೆಗೆದುಕೊಂಡರು. ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಚೌ ಟಿಯೆನ್ ಚೆನ್ ವಿರುದ್ಧದ 86 ನಿಮಿಷಗಳ ಪಂದ್ಯದಲ್ಲಿ ಗೆದ್ದು ಬೀಗಿದ್ದರು.
ಲಕ್ಷ್ಯ ತನ್ನ ಎರಡೂ ಬೆರಳುಗಳನ್ನು ಕಿವಿಯಲ್ಲಿ ಇಟ್ಟು ವಿಜಯೋತ್ಸವವನ್ನು ಆಚರಿಸಿದರು. ಹೊರಗಿನ ಟೀಕೆ-ಮಾತುಗಳನ್ನು ತನಗೆ ಕೇಳಿಸುತ್ತಿಲ್ಲ ಎಂದು ಸೂಚಿಸುವ ಸನ್ನೆಯ ಮೂಲಕ ಸಂಭ್ರಮಿಸಿದರು.