ವಿಶಾಖಪಟ್ಟಣ: ಸತತ ಮೂರು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಬೆಂಗಳೂರು ಬುಲ್ಸ್ ತಂಡವು ಕೊನೆಗೂ ಲಯಕ್ಕೆ ಮರಳಿದೆ. ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು ಮೊದಲ ಜಯ ಸಾಧಿಸಿದೆ.
ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಚೇತೋಹಾರಿ ಪ್ರದರ್ಶನ ನೀಡಿದ ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು 38–30 ಅಂಕಗಳಿಂದ ಸೋಲಿಸಿ ಮೊದಲ ಗೆಲುವು ದಾಖಲಿಸಿತು.
ಕನ್ನಡಿಗ ಬಿ.ಸಿ. ರಮೇಶ್ ಅವರ ಮಾರ್ಗದರ್ಶನದಲ್ಲಿ ಕಣಕ್ಕೆ ಇಳಿದ ಬುಲ್ಸ್ ತಂಡ ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಈ ಗೆಲುವಿನೊಂದಿಗೆ ತಂಡದ ಖಾತೆಯಲ್ಲಿ ಎರಡು ಅಂಕ ಸೇರಿತು.
ವಿಶಾಖಪಟ್ಟಣ ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರಾಮದ ವೇಳೆಗೆ 18–15ರಲ್ಲಿ ಮೂರು ಪಾಯಿಂಟ್‌ಗಳ ಅಲ್ಪ ಮುನ್ನಡೆ ಪಡೆದಿತ್ತು.
ಬೆಂಗಳೂರು ಬುಲ್ಸ್ ಪರ ಅಲಿರೆಜಾ ಮಿರ್ಜೈಯನ್ (10 ಅಂಕ) ಮಿಂಚಿದರೆ, ಆಶಿಶ್ ಮಲಿಕ್ (8 ಅಂಕ),
ಯೋಗೇಶ್ (3 ಅಂಕ) ಮತ್ತು ದೀಪಕ್ (4 ಅಂಕ) ಅವರೂ ಉಪಯುಕ್ತ ಕೊಡುಗೆ ನೀಡಿದರು.
ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ಪರ ಆಯಾನ್ (10 ಅಂಕ) ಮಿಂಚಿದರೆ, ಡಿಫೆಂಡರ್‌ಗಳಾದ ದೀಪಕ್(3) ಮತ್ತು ಸುಧಾಕರ್ 6 ಅಂಕ ಗಳಿಸಿ ತಂಡದ ಹೋರಾಟ ನೀಡಲು ನೆರವಾದರು.
ಬುಲ್ಸ್ ತಂಡ ಇದೇ 8ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.