ಬೆಂಗಳೂರು: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಒಂದಿದೆ. ಇದೇ 24ರಂದು ಕೊಹ್ಲಿ ಅವರು ಬೆಂಗಳೂರಿನ ಕ್ರೀಡಾಂಗಣವೊಂದರಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆದರೆ, ಅದು ದೇಶೀಯ ಕ್ರಿಕೆಟ್‌ನಲ್ಲಿ ಎಂಬುದು ವಿಶೇಷ.
ಡಿಸೆಂಬರ್ 24 ರಿಂದ ಆರಂಭವಾಗುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಲು ಕೊಹ್ಲಿ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದೇಶೀಯ ಅಂಗಳಕ್ಕೆ 15 ವರ್ಷಗಳ ನಂತರ ಮರಳುತ್ತಿದ್ದಾರೆ. ಸದ್ಯ ಭಾರತ ತಂಡದ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿರುವ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಿರತರಾಗಿದ್ದಾರೆ.
37 ವರ್ಷದ ಕೊಹ್ಲಿ ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ಸರಣಿಯ ಆರಂಭಿಕ ಪಂದ್ಯದಲ್ಲಿ ತಮ್ಮ 52 ನೇ ಶತಕವನ್ನು ಬಾರಿಸಿದರು, ಈ ವರ್ಷದ ಆರಂಭದಲ್ಲಿ ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿ ಏಕಪಂದ್ಯಗಳತ್ತ ಮಾತ್ರ ಗಮನ ಹರಿಸಿದ್ದರು.
2010ರ ಫೆಬ್ರವರಿಯಲ್ಲಿ ಸರ್ವಿಸಸ್ ವಿರುದ್ಧ ಆಡಿದ ನಂತರ ವಿರಾಟ್ ಕೊಹ್ಲಿ 2025ರಲ್ಲಿ ಹಜಾರೆ ಟ್ರೋಫಿಗೆ ಮರಳುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ವಿರಾಟ್ ಕೊಹ್ಲಿ ತಮ್ಮ ಲಭ್ಯತೆಯನ್ನು ದೆಹಲಿ ತಂಡಕ್ಕೆ ದೃಢಪಡಿಸಿದ್ದಾರೆ. ಆಂಧ್ರ ವಿರುದ್ಧ ಪಂದ್ಯ ನಡೆಯುಲಿದೆ. 15 ವರ್ಷಗಳ ಬಳಿಕ ಮತ್ತೊಮ್ಮೆ ದೆಹಲಿ ಪರ ಏಕದಿನ ಪಂದ್ಯವನ್ನಾಡಲು ನಿರ್ಧರಿಸಿದ್ದಾರೆ. ಆದರೆ, ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ವಿರಾಟ್ ಕೊಹ್ಲಿ ಇರುವಾಗ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಈ ವರ್ಷದ ಆರಂಭದಲ್ಲಿ, ಕೊಹ್ಲಿ 12 ವರ್ಷಗಳ ನಂತರ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದಾಗ ರಣಜಿ ಟ್ರೋಫಿ ಪಂದ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಕೊಹ್ಲಿ ಆಟವನ್ನು ವೀಕ್ಷಿಸಲು 12,000 ಕ್ಕೂ ಹೆಚ್ಚು ಜನರು ಬಂದಿದ್ದರು.