ರಾಂಚಿ: ಭಾರತ ತಂಡದಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ಟೀಂ ಸೆಲೆಬ್ರೇಷನ್ ನಲ್ಲಿ ಭಾಗವಹಿಸಲು ಒಪ್ಪದೇ ವಿರಾಟ್ ಕೊಹ್ಲಿ ಮುಂದೆ ನಡೆದ ವಿಡಿಯೋವೊಂದು ವೈರಲ್ ಆಗಿದೆ.
ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದಿತು. ಈ ಪಂದ್ಯ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ಅವರು ಅದ್ಭುತ ಶತಕ ಸಿಡಿಸಿ ಪಂದ್ಯ ಶ್ರೇಷ್ಠರಾಗಿದ್ದರು. ಪಂದ್ಯ ಮುಗಿಸಿ ಬಂದಾಗ ತಂಡದ ಆಟಗಾರರಿಗೆ ಹೋಟೆಲ್ ನಲ್ಲಿ ಕೇಕ್ ಕಟಿಂಗ್ ಆಯೋಜಿಸಲಾಗಿತ್ತು.
ಕೆಎಲ್ ರಾಹುಲ್ ಕೇಕ್ ಕಟಿಂಗ್ ಮಾಡುತ್ತಿದ್ದಾಗ ಸಾಮಾನ್ಯ ಎಲ್ಲಾ ಆಟಗಾರರೂ ಅಲ್ಲೇ ಇದ್ದರು. ಅಲ್ಲೇ ಪಕ್ಕದಲ್ಲೇ ವಿರಾಟ್ ಹಾದು ಹೋಗುತ್ತಿದ್ದರು. ಅವರನ್ನು ಇತರರು ಕೇಕ್ ಕಟಿಂಗ್ ಗೆ ಬರುವಂತೆ ಕರೆದರೂ ಕೈ ಸನ್ನೆಯಲ್ಲೇ ಬೇಡ ಎಂದು ಮುಂದೆ ಸಾಗಿದ್ದಾರೆ. ಅವರ ಹಿಂದಿನಿಂದಲೇ ಗಂಭೀರ್ ಮತ್ತು ರೋಹಿತ್ ಗಹನವಾಗಿ ಚರ್ಚೆ ಮಾಡುತ್ತಾ ಬರುತ್ತಿದ್ದರು. ಡ್ರೆಸ್ಸಿಂಗ್ ರೂಂನಲ್ಲೂ ಇಬ್ಬರೂ ವಾದ ಮಾಡುತ್ತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ಟೀಂ ಇಂಡಿಯಾ ಕೋಚ್ ಮತ್ತು ಹಿರಿಯ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಹುಟ್ಟಿಕೊಳ್ಳುವಂತೆ ಮಾಡಿದೆ.