ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಗೆಲುವಿನ ಬಳಿಕ ರೋಹಿತ್ ಶರ್ಮಾ ಜೊತೆ ಕೋಚ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಂನಲ್ಲಿ ಗಂಭೀರವಾಗಿ ಮಾತನಾಡುತ್ತಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಗೆ ಒತ್ತಡ ಕೇಳಿಬರುತ್ತಿದೆ. ಆದರೆ ಇಬ್ಬರೂ ಏಕದಿನ ಮಾದರಿಯಲ್ಲಿ ಮುಂಬರುವ ವಿಶ್ವಕಪ್ ವರೆಗೆ ಮುಂದುವರಿಯುವ ಬಯಕೆ ಹೊಂದಿದ್ದಾರೆ.
ಈಗಾಗಲೇ ರೋಹಿತ್ ಶರ್ಮಾರಿಂದ ನಾಯಕತ್ವ ಕಿತ್ತುಕೊಳ್ಳಲಾಗಿದೆ. ಏಕದಿನದಿಂದಲೂ ನಿವೃತ್ತಿಗೆ ಒತ್ತಡ ಬರುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಮುಗಿದ ಬಳಿಕ ಇಬ್ಬರೂ ಆಟಗಾರರ ಜೊತೆ ಗೌತಮ್ ಗಂಭೀರ್, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಬಿಸಿಸಿಐ ಮಹತ್ವದ ಸಭೆ ನಡೆಸಲಿದೆ ಎಂಬ ಸುದ್ದಿಯಿದೆ.
ಇದರ ನಡುವೆಯೂ ಈ ಇಬ್ಬರೂ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಲೇ ಇದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಸರಣಿ ಶ್ರೇಷ್ಠರಾಗಿದ್ದರೆ ನಿನ್ನೆಯ ಪಂದ್ಯದಲ್ಲೂ ಅವರು ಅರ್ಧಶತಕ ಸಿಡಿಸಿದ್ದರು. ವಿರಾಟ್ ಕೊಹ್ಲಿ ಕೂಡಾ ನಿನ್ನೆ ಶತಕ ಸಿಡಿಸಿದ್ದರು.
ಹೀಗಿದ್ದರೂ ನಿನ್ನೆ ಪಂದ್ಯದ ಬಳಿಕ ರೋಹಿತ್ ಜೊತೆ ಗಂಭೀರ್ ಏನೋ ಅಸಮಾಧಾನ ಹೊರಹಾಕುತ್ತಿದ್ದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ರೋಹಿತ್ ತಲೆ ಅಲ್ಲಾಡಿಸುತ್ತಾ ಸ್ಪಷ್ಟನೆ ನೀಡುತ್ತಿದ್ದರು. ಅವರ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಇಷ್ಟು ಮಾಡಿದ್ರೂ ಗಂಭೀರ್ ಗೆ ಸಮಾಧಾನವಿಲ್ವಾ? ತಂಡದೊಳಗೆ ಎಲ್ಲವೂ ಸರಿಯಿಲ್ವಾ ಎಂಬಿತ್ಯಾದಿ ಪ್ರಶ್ನೆಗಳು ಬಂದಿವೆ. ಇನ್ನು ಕೆಲವು ಮೂಲಗಳ ಪ್ರಕಾರ ಗಂಭೀರ್ ಮತ್ತು ಕೊಹ್ಲಿ ನಡುವೆ ಮಾತುಕತೆಯೇ ಇಲ್ಲ ಎನ್ನಲಾಗುತ್ತಿದೆ.