ಮುಂಬೈ: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಈಗ ಭಾರೀ ಚರ್ಚೆಯಲ್ಲಿದ್ದಾರೆ. ಕೊಹ್ಲಿ ಮತ್ತು ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸು ಗುಸು ಹರಿದಾಡುತ್ತಿದೆ. ಇದರ ನಡುವೆ ಈಗ ಗಂಭೀರ್ ಮತ್ತು ಕೊಹ್ಲಿಗೆ ವೈಮನಸ್ಯ ಹುಟ್ಟಿಕೊಳ್ಳಲು ಮೂಲ ಕಾರಣ ಯಾವುದು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಟೀಂ ಇಂಡಿಯಾ ಕೋಚ್ ಆಗುವ ಮೊದಲು ಗಂಭೀರ್ ಹಲವು ಬಾರಿ ಕೊಹ್ಲಿ ಜೊತೆ ಮೈದಾನದಲ್ಲಿ ಕಿತ್ತಾಡಿದ್ದು ಇದೆ. ಹೊರಗೆಯೂ ಗಂಭೀರ್ ಯಾವತ್ತೂ ಕೊಹ್ಲಿ ಬಗ್ಗೆ ಹೊಗಳಿ ಮಾತನಾಡುತ್ತಿದ್ದುದು ಕಡಿಮೆ. ಧೋನಿ ಬಗ್ಗೆಯೂ ಅವರ ಒಬ್ಬರ ಸಿಕ್ಸರ್ ನಿಂದ 2011 ರ ವಿಶ್ವಕಪ್ ಗೆಲ್ಲಲಿಲ್ಲ ಎಂದು ಟೀಕಿಸುತ್ತಲೇ ಇದ್ದರು.
ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ವಿಚಾರವೊಂದು ಚರ್ಚೆಯಾಗುತ್ತಿದೆ. ಇದುವೇ ಗಂಭೀರ್ ಗೆ ಕೊಹ್ಲಿ, ಧೋನಿ ಮೇಲೆ ವೈಮನಸ್ಯವೇರ್ಪಡಲು ಮೂಲ ಕಾರಣ ಎನ್ನಲಾಗುತ್ತಿದೆ.
2012 ರಲ್ಲಿ ಆಸ್ಟ್ರೇಲಿಯಾದಲ್ಲಿ ಕಾಮನ್ ವೆಲ್ತ್ ಬ್ಯಾಂಕ್ ಸೀರೀಸ್ ನಲ್ಲಿ ಭಾರತ ಫೈನಲ್ ಗೇರಲು ವಿಫಲವಾಗಿತ್ತು. ಆಗ ತಂಡದ ನಾಯಕ ಧೋನಿ ಆಗಿದ್ದರೆ ಗಂಭೀರ್ ಉಪನಾಯಕರಾಗಿದ್ದರು. ಈ ಸರಣಿ ಬಳಿಕ ಕೋಚ್ ಡಂಕನ್ ಫ್ಲೆಚರ್ ವರದಿ ಮೇರೆಗೆ ಗಂಭೀರ್ ರನ್ನು ಉಪನಾಯಕ ಸ್ಥಾನದಿಂದ ಕಿತ್ತು ಹಾಕಿ ವಿರಾಟ್ ಕೊಹ್ಲಿಯನ್ನು ಆ ಸ್ಥಾನಕ್ಕೆ ನೇಮಿಸಲಾಯಿತು.
ಇದರ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಗಂಭೀರ್ ಅಸಮಾಧಾನ ಹೊರಹಾಕಿದ್ದರು. ಎಲ್ಲಾದರೂ ಒಂದು ಸರಣಿ ವಿಫಲವಾದಾಗ ನಾಯಕನನ್ನು ಕಿತ್ತು ಹಾಕುವ ಬದಲು ಉಪನಾಯಕನನ್ನು ಕಿತ್ತು ಹಾಕುವುದನ್ನು ನೋಡಿದ್ದಿರಾ ಎಂದು ಗಂಭೀರ್ ಪ್ರಶ್ನೆ ಮಾಡಿದ್ದರು. ಇದೀಗ ಕೊಹ್ಲಿ ಫ್ಯಾನ್ಸ್ ಇದೇ ವಿಚಾರಕ್ಕೇ ಗಂಭೀರ್ ಈಗಲೂ ಕೆಂಡ ಕಾರುತ್ತಿದ್ದಾರೆ ಎನ್ನುತ್ತಿದ್ದಾರೆ.