ರಾಂಚಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳ ನಡುವೆಯೇ ರಾಂಚಿ ವಿಮಾನ ನಿಲ್ದಾಣದಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರವಾಗಿ ಚರ್ಚೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ್ದರೆ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿದ್ದಾರೆ. ಈ ಪಂದ್ಯವನ್ನು ಭಾರತ ಗೆದ್ದರೂ ಪಂದ್ಯದ ನಂತರ ಈ ಇಬ್ಬರೂ ಆಟಗಾರರು ಮತ್ತು ಕೋಚ್ ಗಂಭೀರ್ ವರ್ತನೆ ಎಲ್ಲರೂ ಹುಬ್ಬೇರುವಂತೆ ಮಾಡಿತ್ತು.
ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಈಗ ಬಟಾ ಬಯಲಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಕೋಚ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜೊತೆ ಸಭೆ ಕರೆದಿದೆ ಎಂಬ ಸುದ್ದಿಯಿದೆ.
ಇದರ ನಡುವೆ ಎರಡನೇ ಏಕದಿನ ಪಂದ್ಯವಾಡಲು ರಾಯ್ಪುರಕ್ಕೆ ತೆರಳಲು ರಾಂಚಿ ವಿಮಾನ ನಿಲ್ದಾಣದಲ್ಲಿ ತಂಡದ ಇತರೆ ಆಟಗಾರರ ಜೊತೆ ಕುಳಿತಿದ್ದ ವಿರಾಟ್ ಕೊಹ್ಲಿ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಜೊತೆ ಗಹನವಾಗಿ ಮಾತನಾಡುತ್ತಿರುವುದು ಗಮನ ಸೆಳೆದಿದೆ. ಕೊಹ್ಲಿ ಏನೋ ತಮ್ಮ ವಾದ ಮಂಡಿಸುತ್ತಿದ್ದರೆ ಪ್ರಗ್ಯಾನ್ ತಲೆ ಅಲ್ಲಾಡಿಸುತ್ತಾ ಹೇಳುವುದೆಲ್ಲವನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊಹ್ಲಿಗೆ ಅಸಮಾಧಾನವಿರುವುದಂತೂ ನಿಜ ಎನ್ನಲಾಗುತ್ತಿದೆ.