Select Your Language

Notifications

webdunia
webdunia
webdunia
webdunia

ಇಂದು ಮಹತ್ವದ ಸಿಡಬ್ಲ್ಯೂಎಂಎ ಸಭೆ

ಇಂದು ಮಹತ್ವದ ಸಿಡಬ್ಲ್ಯೂಎಂಎ ಸಭೆ
ನವದೆಹಲಿ , ಮಂಗಳವಾರ, 31 ಆಗಸ್ಟ್ 2021 (10:51 IST)
ನವದೆಹಲಿ, ಆ. 31: ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ.

ಸಭೆಯಲ್ಲಿ ಕರ್ನಾಟಕ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣದ ಬಗ್ಗೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಎಂದಿನಂತೆ ತಮಿಳುನಾಡು ಕರ್ನಾಟಕದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮತ್ತು ವಿಸ್ತೃತ ಯೋಜನಾ ವರದಿಯನ್ನು ವಿರೋಧಿಸಲಿದೆ.
ಆಗಸ್ಟ್ 25ರಂದು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್  ಅವರನ್ನು ಭೇಟಿ ಮಾಡಿ ರಾಜ್ಯದ ಜಲ ವಿವಾದಗಳ ಬಗ್ಗೆ ಚರ್ಚೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಕೆದಾಟು ಯೋಜನೆ ಬಗ್ಗೆ ಒತ್ತು ನೀಡಿದ್ದರು. ಕೇಂದ್ರ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, 'ಮೇಕೆದಾಟು ಡಿಪಿಆರ್ ವಿಷಯವೇ ಮುಂದಿನ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾ ಆಗಿರಲಿದೆ' ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಹತ್ವದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕರ್ನಾಟಕದ ಪಾಲಿಗೆ ಅಪಾರವಾದ ನಿರೀಕ್ಷೆ ಹುಟ್ಟುಹಾಕಿದೆ. ಇಂದಿನ ಸಭೆಯಲ್ಲಿ ತಮಿಳುನಾಡಿನ ವಿರೋಧದ ನಡುವೆಯೂ ಒಂದೊಮ್ಮೆ ಕರ್ನಾಟಕದ ಡಿಪಿಆರ್ಗೆ ಸಭೆ ಒಪ್ಪಿಗೆ ನೀಡಿದರೆ ಬಳಿಕ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗ ಅನುಮೋದನೆಗೆ ಕಳುಹಿಸಿಕೊಡಲಾಗುತ್ತದೆ.
ಮೇಕೆದಾಟು ಯೋಜನೆಗೆ ಅಂತಿಮ ಅನುಮೋದನೆ ನೀಡಬೇಕಿರುವುದು ಕೇಂದ್ರ ಜಲ ಆಯೋಗ. ಈ ಹಿನ್ನೆಲೆಯಲ್ಲಿ ಇದು ಅಂತಿಮ ಘಟ್ಟ ಆಗಿರುವುದರಿಂದ ತಮಿಳುನಾಡು ತೀವ್ರವಾಗಿ ವಿರೋಧಿಸಲಿದೆ ಮತ್ತು ಇಂದಿನ ಸಭೆಗೆ ಹೆಚ್ಚು ಮಹತ್ವ ಬಂದಿದೆ. ಇದೇ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮತ್ತೊಂದು ದೂರು ಸಲ್ಲಿಸಿದೆ. '2019ರಂದು ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ ಅನ್ನು ವಜಾಗೊಳಿಸಲು ಕೇಂದ್ರ ಜಲ ಆಯೋಗಕ್ಕೆ ಸೂಚನೆ ನೀಡುವಂತೆ' ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಿಡೆಂಟ್ನಲ್ಲಿ ತಮಿಳುನಾಡು ಶಾಸಕರ ಮಗ ಸಾವು