ಜುಲೈ 12ರಂದು ಸರ್ವಪಕ್ಷ ಸಭೆ ಕರೆದ ತಮಿಳುನಾಡು
ಪರಿಣಾಮ ಮೇಕೆದಾಟು ಯೋಜನೆಯನ್ನು ಶತಾಯಗತಾಯ ತಡೆಯಬೇಕೆಂದು ತಮಿಳುನಾಡು ಯತ್ನಿಸುತ್ತಿದೆ.
ನವದೆಹಲಿ, ಜು. 9: ಬೆಂಗಳೂರಿನ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಆರಂಭಿಸಿತ್ತು. ಆದರೆ, ಈ ಯೋಜನೆಯ ಮೂಲಕ ತಮಿಳುನಾಡಿನ ನೀರಿನ ಪಾಲಿಗೆ ಕುತ್ತಾಗಲಿದೆ.
ಅಲ್ಲಿನ ರೈತರಿಗೆ ಅನ್ಯಾಯವಾಗಲಿದೆ ಎಂಬುದು ತಮಿಳುನಾಡಿನ ಆರೋಪ. ಇದೇ ಕಾರಣಕ್ಕೆ ತಮಿಳುನಾಡು ಸರ್ಕಾರ ಕಳೆದ ಒಂದು ದಶಕಗಳಿಂದ ಯೋಜನೆಯ ವಿರುದ್ಧ ದ್ವನಿ ಎತ್ತುತ್ತಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಜುಲೈ 12ರಂದು ತಮಿಳುನಾಡು ಸರ್ಕಾರ ಅಲ್ಲಿನ ಸರ್ವ ಪಕ್ಷಗಳ ಸಭೆ ಕರೆದಿದೆ.
(ಜುಲೈ 7ರಂದು) ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಭೇಟಿ ವೇಳೆ "ಯೋಜನೆ ಬಗೆಗಿನ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೆ ಯೋಜನೆಗೆ ಅನುಮತಿ ಕೊಡಬೇಡಿ. ಕರ್ನಾಟಕ ತರಾತುರಿಯಲ್ಲಿ ಯೋಜನೆ ಆರಂಭಿಸುತ್ತಿದೆ. ಈ ಯೋಜನೆ ಆರಂಭವಾದರೆ ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೆ ಸಮಸ್ಯೆ ಉಲ್ಬಣವಾಗುತ್ತದೆ. ತಮಿಳುನಾಡಿನ ರೈತರಿಗೆ ಅನ್ಯಾಯವಾಗಲಿದೆ" ಎಂದು ದೊರೈ ಮುರುಗನ್ ಅವರು ದೂರು ನೀಡಿದ್ದರು ಎನ್ನಲಾಗಿದೆ.
ಅಸಲಿಗೆ ಅಂತರ ರಾಜ್ಯ ಜಲ ವಿವಾದಗಳು ನ್ಯಾಯಾಲಯ ಮತ್ತು ನ್ಯಾಯಾಧೀಕರಗಳು ಹೇಳಿದಾಗಲೂ ಮಾತುಕತೆ ಮೂಲಕ ಬಗೆಹರಿದ ಉದಾಹರಣೆಗಳಿಲ್ಲ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಶತಕಗಳಿಂದಲೂ ನಡೆದುಕೊಂಡು ಬರುತ್ತಿರುವ ಕಾವೇರಿ ಜಲ ವಿವಾದ ಅತ್ಯಂತ ಸೂಕ್ಷ್ಮವಾದುದಾಗಿದೆ. ರಾಜಕೀಯ ಕಾರಣಗಳಿಗೆ ಮಾತ್ರವಲ್ಲದೆ ಜನ ಸಮಾನ್ಯರು ಕೂಡ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಸಂಗತಿಯಾಗಿದೆ. ಆದರೆ, ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸದೆ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡಿಗೆ ಹೊಸದಾಗಿ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿರುವ ಎಂ.ಕೆ. ಸ್ಟಾಲಿನ್ ಅವರಿಗೆ ಶುಭಕೋರಿ ಬರೆದ ಪತ್ರದಲ್ಲಿ ಮೇಕೆದಾಟು ಯೋಜನೆಯನ್ನು ಉಲ್ಲೇಖಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ಪರಿಣಾಮ ಮೇಕೆದಾಟು ಯೋಜನೆಯನ್ನು ಶತಾಯಗತಾಯ ತಡೆಯಬೇಕೆಂದು ತಮಿಳುನಾಡು ಯತ್ನಿಸುತ್ತಿದೆ.
ಇವರು ಬರೆದ ಪತ್ರದಿಂದ ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಹಿನ್ನಡೆಯಾಗುವ ಸಂಗತಿ ಇದರಿಂದ ದಟ್ಟವಾಗುತ್ತಿದೆ.
ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಯೋಜನೆಗಾಗಿ ರೂಪಿಸಿದ್ದ ಮೇಕೆದಾಟು ಅಣೆಕಟ್ಟು ಯೋಜನೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದು ತಾತ್ವಿಕ ಒಪ್ಪಿಗೆ ಪಡೆದಿದೆ. ರಾಷ್ಟ್ರೀಯ ಜಲ ನೀತಿಯಲ್ಲೂ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲು ಕೆಲವು ರಿಯಾಯಿತಿಗಳಿವೆ. ಮೇಕೆದಾಟು ಅಣೆಕಟ್ಟು ಯೋಜನೆ ಮೂಲಕ ತಮಿಳುನಾಡಿಗೆ ಹೋಗುತ್ತಿದ್ದ ಕರ್ನಾಟಕದಲ್ಲಿ ತಡೆಯುತ್ತಿರಲಿಲ್ಲ. ತಮಿಳುನಾಡು ಪಾಲಿನ ನೀರನ್ನು ಕೊಡುವುದಾಗಿ ಕರ್ನಾಟಕ ಹೇಳುತ್ತಾ ಬಂದಿತ್ತು. ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುವುದಾಗಿ ಹೇಳಿತ್ತು. ಈ ಎಲ್ಲಾ ಹಿನ್ನಲೆಯಲ್ಲೇ ಕರ್ನಾಟಕ ಯೋಜನೆಯ ಡಿಪಿಆರ್ ಅನ್ನು ರೂಪಿಸಿತ್ತು.
ಆದರೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ 'ಸೌಜನ್ಯದ ಪತ್ರ' ಬರೆದು ಕರ್ನಾಟಕದ ಹಿತಾಸಕ್ತಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಈಗಾಗಲೇ ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಜೊತೆಗೀಗ ಸಿಎಂ ಯಡಿಯೂರಪ್ಪ ಪತ್ರಕ್ಕೆ ಪ್ರತಿಕ್ರಿಯೆ ರೂಪದ ಪತ್ರ ಬತೆದಿರುವ ತಮಿಳುನಾಡು ಸಿಎಂ ಸ್ಟಾಲಿನ್ ಮೇಕೆದಾಟು ಯೋಜನೆಗೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿ ಯೋಜನೆ ಆರಂಭಿಸದಂತೆ ತಾಖೀತು ಮಾಡಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವರ ಭೇಟಿಯಾಗಿದೆ. ಈಗ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತಿದೆ. ಸಭೆಯಲ್ಲಿ ಮೇಕೆದಾಟು ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡು ಕೇಂದ್ರದ ಒತ್ತಡ ಹೇರುವ ಸಾಧ್ಯತೆ ಇದೆ.