ಬೆಂಗಳೂರು(ಆ.31): ಅವರೆಲ್ಲರೂ ಗೆಳೆಯರು, ಮಧ್ಯರಾತ್ರಿ ಜಾಲಿಯಾಗಿ ಕಾರಿನಲ್ಲಿ ಹೋಗುತ್ತಿದ್ದರು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಯಾರೂ ನಿರೀಕ್ಷಿಸದ ಮಟ್ಟಕ್ಕೆ ಅಲ್ಲೊಂದು ದುರಂತ ಸಂಭವಿಸಿಯಾಗಿತ್ತು. ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ ನಿಜಕ್ಕೂ ದಿಗ್ಬ್ರಮೆ ಮೂಡಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ನೋಡಿದರೆ ಎದೆ ಝಲ್ ಎನಿಸುತ್ತೆ. ಈ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿರುವುದು ಮತ್ತೊಂದು ದುರಂತ.
ಈ ಅಪಘಾತದಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕರ ಮಗನೂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಹೊಸೂರು ಕ್ಷೇತ್ರದ ಶಾಸಕ Y. ಪ್ರಕಾಶ್ ಅವರ ಮಗ ಕರುಣಾ ಸಾಗರ್ ಕೂಡ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತಕ್ಕೆ ಬಲಿಯಾಗಿದ್ದಾನೆ. ವಿಷಯ ತಿಳಿದ ಹೊಸೂರು ಶಾಸಕರ ಬೆಂಬಲಿಗರು ಹಾಗೂ ಕುಟುಂಬ ಸದಸ್ಯರು ಸೇಂಟ್ ಜಾನ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಶಾಸಕರಿಗೆ ಇದ್ದದ್ದು ಒಬ್ಬನೇ ಮಗ ಎನ್ನಲಾಗಿದೆ. ಸ್ಥಳಕ್ಕೆ ಟ್ರಾಫಿಕ್ ಈಸ್ಟ್ ಡಿಸಿಪಿ ಶಾಂತರಾಜು ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಹೊಸೂರು ಕ್ಷೇತ್ರದ ಶಾಸಕ Y. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ ಸಾವಿನ ಸುದ್ದಿ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕರುಣಾ ಸಾಗರ್ 28ರ ಹರೆಯದ ಯುವಕ, ಬ್ಯುಸಿನೆಸ್ ಮಾಡುತ್ತಿದ್ದ. ನಿನ್ನೆ ಸಂಜೆ ಮೆಡಿಸಿನ್ ಹಾಕಿಸಿಕೊಳ್ಳುತ್ತೇನೆಂದು ಹೊಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ. ಆಡಿ ಕಾರಿನಲ್ಲಿ ಆರು ಸ್ನೇಹಿತರ ಜೊತೆ ಬೆಂಗಳೂರಿಗೆ ಬಂದಿದ್ದ. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಅತೀ ವೇಗವಾಗಿ ಬಂದ ಆಡಿ ಕಾರು ಫುಟ್ಪಾತ್ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ 7 ಜನರೂ ದುರಂತ ಅಂತ್ಯ ಕಂಡಿದ್ದರು.
ಶಾಸಕರ ಮಗನಿಂದಲೇ ಕಾರ್ ಡ್ರೈವಿಂಗ್
ಅತಿವೇಗ ಹಾಗೂ ಅಜಾಗರೂಕತೆಯೇ ಏಳು ಮಂದಿಯ ಪ್ರಾಣಕ್ಕೆ ಕುತ್ತು ತಂದಿತ್ತು. ಕಾರು ಓಡಿಸುತ್ತಿದ್ದದ್ದು ಮೃತ ಕರುಣಾ ಸಾಗರ್ ಎಂದು ತಿಳಿದು ಬಂದಿದೆ. ಪಾರ್ಟಿ ಮಾಡಿಕೊಂಡು ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದ. ರಾತ್ರಿ 11.30 ಗೆ ಪಾರ್ಟಿ ಮುಗಿಸಿ ಸಿಟಿ ರೌಂಡ್ಸ್ ಹಾಕುತ್ತಿದ್ದರು. ಅತಿ ವೇಗದಿಂದ ಚಾಲನೆ ಮಾಡ್ತಿದ್ದ ಹಿನ್ನೆಲೆ, ರಸ್ತೆ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಗೋಡೆಗೆ ಟಚ್ ಆಗಿದೆ. ಸೀಟ್ ಬೆಲ್ಟ್ ಹಾಕದೆ ಡ್ರೈವಿಂಗ್ ಮಾಡುತ್ತಿದ್ದರು. ದುರಾದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಕೂಡಾ ಓಪನ್ ಆಗಿರಲಿಲ್ಲ ಎಂದು ತಿಳಿದು ಬಂದಿದೆ.