ನವದೆಹಲಿ: ಪ್ರತಿಷ್ಠಿತ ಬಿಬಿಸಿ ಸ್ಪೋರ್ಟ್ಸ್ ಅವಾರ್ಡ್ 2024 ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಭಾರತದ ಮಹಿಳಾ ಕ್ರೀಡಾ ತಾರೆಯರಾದ ಶೂಟರ್ ಮನು ಭಾಕರ್, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಗೆ ಅತ್ಯುನ್ನತ ಗೌರವ ಲಭಿಸಿದೆ.
ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಶೂಟರ್ ಮನು ಭಾಕರ್ ಗೆ ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ 2024 ಪ್ರಶಸ್ತಿ ಲಭಿಸಿದೆ. ಕಳೆದ ಒಲಿಂಪಿಕ್ಸ್ ನಲ್ಲಿ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಮನುಭಾಕರ್ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಇನ್ನು ಪ್ಯಾರಾ ಒಲಿಂಪಿಕ್ಸ್ ತಾರೆ ಅವನಿ ಲೇಖರಾ ಬಿಬಿಸಿ ಪ್ಯಾರಾ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದರು. ಇನ್ನು, ಆರ್ಚರಿ ಪಟು ಶೀತಲ್ ದೇವಿ ಉದಯೋನ್ಮುಖ ತಾರೆ ಪ್ರಶಸ್ತಿ ಪಡೆದರು.
ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. 42 ವರ್ಷದ ಮಿಥಾಲಿ 2004 ರಿಂದ 2022 ರ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ಮಹಿಳಾ ಕ್ರಿಕೆಟ್ ತಂಡದ ಸಚಿನ್ ತೆಂಡುಲ್ಕರ್ ಎಂದೇ ಪರಿಗಣಿತವಾಗಿರುವ ಮಿಥಾಲಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಫೈನಲ್ ಗೂ ಲಗ್ಗೆಯಿಟ್ಟಿತ್ತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಿಳಾ ತಾರಾ ಕ್ರೀಡಾಳುಗಳ ದಂಡೇ ನೆರೆದಿತ್ತು.