ನವದೆಹಲಿ: ಈ ಬಾರಿ ಒಲಿಂಪಿಕ್ಸ್ ನಲ್ಲಿ ಎರಡೆರಡು ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದ ಶೂಟರ್ ಮನು ಭಾಕರ್ ಹೆಸರು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳದೇ ಇರುವುದಕ್ಕೆ ಅವರ ತಂದೆ ಬೇಸರ ಹೊರಹಾಕಿದ್ದಾರೆ.
ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಹೆಸರು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಆದರೆ ಮನುಭಾಕರ್ ಅರ್ಜಿ ಸಲ್ಲಿಸದೇ ಇರುವುದರಿಂದ ಅವರ ಹೆಸರು ನಾಮನಿರ್ದೇಶನಗೊಂಡಿಲ್ಲ ಎಂದು ಕ್ರೀಡಾ ಇಲಾಖೆ ಹೇಳಿತ್ತು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ನಾನು ಅರ್ಜಿ ಸಲ್ಲಿಸಿದ್ದೇನೆ. ಆದರೆ ಕ್ರೀಡಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದೇ ಒಲಿಂಪಿಕ್ಸ್ ನಲ್ಲಿ ಎರಡೆರಡು ಪದಕ ಗೆದ್ದ ಮೇಲೂ ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೇವಲ 6 ಪದಕ ಬಂದಿತ್ತು. ಈ ಪೈಕಿ ಎರಡು ಪದಕವನ್ನೂ ಮನುಭಾಕರ್ ಗೆದ್ದುಕೊಟ್ಟಿದ್ದರು. ಒಂದು ವೈಯಕ್ತಿಕ ವಿಭಾಗದಲ್ಲಿ ಇನ್ನೊಂದು ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಮಾಡಿದ್ದರು. ಆದರೆ ಇಂತಹ ಸಾಧನೆ ಮಾಡಿದ ತಾರೆಗೆ ಪ್ರಶಸ್ತಿ ಇಲ್ಲದೇ ಹೋಗಿದ್ದು ವಿಪರ್ಯಾಸ.