ಹರ್ಯಾಣ: ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರೆ ಶೂಟಿಂಗ್ ವಿಭಾಗದಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದರು. ಆದರೂ ಹರ್ಯಾಣ ಸರ್ಕಾರ ಮನು ಭಾಕರ್ ಗೆ ಹೆಚ್ಚು ಬಹುಮಾನ ಮೊತ್ತ ನಿಡಿದೆ. ಇದಕ್ಕೆ ಕಾರಣವೂ ಇದೆ.
ಸಾಮಾನ್ಯವಾಗಿ ಚಿನ್ನ, ಬೆಳ್ಳಿ ಪದಕ ಗೆದ್ದವರಿಗೆ ಕಂಚಿನ ಪದಕ ಗೆದ್ದವರಿಗಿಂತ ಹೆಚ್ಚು ಬಹುಮಾನ ಮೊತ್ತ ನೀಡಲಾಗುತ್ತದೆ. ಆದರೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಮನು ಭಾಕರ್ ಗೆ ಹರ್ಯಾಣ ಸರ್ಕಾರ 5 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ.
ಆದರೆ ಕಳೆದ ಬಾರಿ ಚಿನ್ನ ಗೆದ್ದು ಈ ಬಾರಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಗೆ ಕೇವಲ 4 ಕೋಟಿ ರೂ. ಬಹುಮಾನ ಮೊತ್ತ ಘೋಷಣೆ ಮಾಡಲಾಗಿದೆ. ಕಂಚಿನ ಪದಕ ಗೆದ್ದರೂ ಮನುಗೆ ಹೆಚ್ಚು ಬೆಳ್ಳಿ ಪದಕ ಗೆದ್ದರೂ ನೀರಜ್ ಗೆ ಕಡಿಮೆ ಬಹುಮಾನ ಮೊತ್ತ ನೀಡಲೂ ಕಾರಣವಿದೆ.
ಮನು ಭಾಕರ್ ಈ ಬಾರಿ ಒಂದು ವೈಯಕ್ತಿಕ ವಿಭಾಗ ಮತ್ತು ಇನ್ನೊಂದು ಮಿಕ್ಸೆಡ್ ಡಬಲ್ಸ್ ಈವೆಂಟ್ ನಲ್ಲಿ ಸೇರಿದಂತೆ ಎರಡು ಕಂಚಿನ ಪದಕ ಗೆದ್ದುಕೊಂಡಿದ್ದರು. ಕಂಚಿನ ಪದಕವಾದರೂ ಎರಡು ಪದಕ ಗೆದ್ದಿರುವುದಕ್ಕೆ ಮನು ಭಾಕರ್ ಗೆ ನೀರಜ್ ಗಿಂತ 1 ಕೋಟಿ ರೂ. ಹೆಚ್ಚು ಬಹುಮಾನ ಮೊತ್ತ ನೀಡಲಾಗಿದೆ.