ಬೆಂಗಳೂರು: ಐಪಿಎಲ್ 2025 ಕ್ಕೆ ಮೆಗಾ ಹರಾಜು ನಡೆಯಲಿದ್ದು, ಟೀಂ ಇಂಡಿಯಾದ ಸ್ಟಾರ್ ಬ್ಯಾಟಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಸೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಬೆಸ್ಟ್ ಫಿನಿಶರ್ ಎನಿಸಿಕೊಂಡಿರುವ ಯುವ ಬ್ಯಾಟಿಗ ರಿಂಕು ಸಿಂಗ್ ಈಗ ಆರ್ ಸಿಬಿ ಪರ ಆಡುವ ಇಂಗಿತವನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಒಂದು ವೇಳೆ ಕೆಕೆಆರ್ ತಂಡ ಮುಂದಿನ ಆವೃತ್ತಿಗೆ ನಿಮ್ಮನ್ನು ರಿಟೈನ್ ಮಾಡದೇ ಇದ್ದರೆ ಯಾವ ತಂಡದ ಪರ ಆಡಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ಆಗ ರಿಂಕು ಆರ್ ಸಿಬಿ ಪರ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಮುಂದಿನ ಐಪಿಎಲ್ ಆವೃತ್ತಿಗೆ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ಕೆಕೆಆರ್ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರಿಂಕು ಸಿಂಗ್ ಅದ್ಭುತ ಫಿನಿಶರ್ ಎಂದೇ ಹೆಸರು ಮಾಡಿದ್ದಾರೆ. ಅವರನ್ನು ಫ್ರಾಂಚೈಸಿ ಅಷ್ಟು ಬೇಗ ಬಿಟ್ಟುಕೊಡದು.
ಈ ಬಾರಿ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿದೆ. ರಿಂಕು ಸಿಂಗ್ ಐಪಿಎಲ್ ನಲ್ಲಿ ಬೇಡಿಕೆಯ ಆಟಗಾರನಾಗಿದ್ದು ಒಂದು ವೇಳೆ ಕೆಕೆಆರ್ ತಂಡ ಅವರನ್ನು ರಿಟೈನ್ ಮಾಡದೇ ಇದ್ದರೂ ಬೇರೆ ತಂಡಗಳು ಅವರನ್ನು ಖರೀದಿಸಲು ಪೈಪೋಟಿಗೆ ಬೀಳಲಿದೆ.