ಪಾಟ್ನಾ: ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಸ್ಕೂಟಿ ಹತ್ತಿಸಲೆತ್ನಿಸಿದ ಹೀನ ಕೃತ್ಯ ಬಿಹಾರದಲ್ಲಿ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂಚಾರ ನಿಯಮ ಉಲ್ಲಂಘಿಸುವುದು ಗಂಭೀರ ಅಪವಾದವೇ. ಇದರಲ್ಲಿ ಯಾವುದೇ ಸಂಶೈವಿಲ್ಲ. ಆದರೆ ಇದೇ ನೆಪದಲ್ಲಿ ಪೊಲೀಸರು ಇತ್ತೀಚೆಗೆ ಕೆಲವೊಂದು ಮಾನವೀಯತೆ ಮರೆತು ವರ್ತಿಸುವ ಘಟನೆಗಳು ಬೆಳಕಿಗೆ ಬರುತ್ತಿವೆ. ಅಂತಹದ್ದೇ ಒಂದು ಘಟನೆ ಇದಾಗಿದೆ.
ಮಹಿಳೆಯನ್ನು ತಡೆದ ಪೊಲೀಸರು ಆಕೆಯ ಸ್ಕೂಟಿಯನ್ನು ಚಲಾಯಿಸಿಕೊಂಡು ಸ್ಟೇಷನ್ ಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ. ಆದರೆ ಬೇಡವೆಂದು ಸ್ಕೂಟಿಯ ಮುಂಭಾಗ ನಿಂತು ಮಹಿಳೆ ತಡೆಯಲು ಯತ್ನಿಸಿದಾಗ ಆಕೆಯ ಮೇಲೆಯೇ ಸ್ಕೂಟಿ ಹತ್ತಿಸಲು ಪ್ರಯತ್ನಿಸುತ್ತಾರೆ.
ಈ ಘಟನೆ ನಡೆದಿರುವುದು ಬಿಹಾರದ ಪಾಟ್ನಾದಲ್ಲಿ. ಮಹಿಳೆ ಗರ್ಭಿಣಿಯಾಗಿದ್ದಳು ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಹಾರ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.