ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಮಾಡುತ್ತಿದ್ದ ಮಹಿಳೆ ಮೇಲೆ ಚೀತಾ ದಾಳಿ ನಡೆಸಿದ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ.
ಬನ್ನೇರುಘಟ್ಟದಲ್ಲಿ ವನ್ಯ ಜೀವಿಗಳನ್ನು ವೀಕ್ಷಿಸಲು ಸಫಾರಿ ಮಾಡಲಾಗುತ್ತದೆ. ಇದೇ ರೀತಿ ಸಫಾರಿ ಬಸ್ ನಲ್ಲಿ ತೆರಳುತ್ತಿದ್ದ ಮಹಿಳೆಯ ಮೇಲೆ ಚಿರತೆ ದಾಳಿಗೆ ಮುಂದಾಗಿದೆ. ಇದರಿಂದ ಮಹಿಳೆ ಕೈಗೆ ಗಾಯಗಳಾಗಿವೆ. ಸದ್ಯಕ್ಕೆ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಾಹನಕ್ಕೆ ಮೆಷ್ ಅಳವಡಿಸಲಾಗಿದೆ. ಹಾಗಿದ್ದರೂ ಕೆಳಗೆ ಸ್ವಲ್ಪ ಸಂಧಿಯಿದ್ದು, ಇದರ ನಡುವೆ ತೂರಿಕೊಂಡ ಚಿರತೆ ಬಸ್ ನೊಳಗಿದ್ದ ಮಹಿಳೆಯ ಮೇಲೆ ದಾಳಿ ಮಾಡಿದೆ. ಘಟನೆಯಿಂದ ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಸಮಯದವರೆಗೆ ಸಫಾರಿ ಸ್ಥಗಿತಗೊಳಿಸಲಾಯಿತು.
ಕೆಲವು ಸಮಯದ ಹಿಂದೆ ಇದೇ ರೀತಿ ಸಫಾರಿ ವಾಹನದತ್ತ ಚಿರತೆಯೊಂದು ನುಗ್ಗಿ ಬಂದಿತ್ತು. ಆದರೆ ಆಗ ಅದಕ್ಕೆ ದಾಳಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ವಾಹನದ ಮೆಷ್ ಬಳಿ ಇಣುಕಿ ಯಾವುದೇ ಅಪಾಯ ಮಾಡದೇ ತೆರಳಿತ್ತು. ಇದೀಗ ಮತ್ತೆ ಬನ್ನೇರುಘಟ್ಟದಲ್ಲಿ ಅಂತಹದ್ದೇ ಘಟನೆ ನಡೆದಿರುವುದು ಆತಂಕ ತರುವಂತಿದೆ.