ಬೆಂಗಳೂರು: ಹಿಂದುಳಿದವರು, ದಲಿತರು ಸೇರಿದಂತೆ ಶೂದ್ರ ಸಮುದಾಯದವರು ತಮ್ಮ ವಿರೋಧಿಗಳಾದ ಬಿಜೆಪಿ, ಆರ್ ಎಸ್ಎಸ್ ಸಂಘಟನೆ ಸೇರುತ್ತಾರಲ್ಲಾ? ಅವರಿಗೆ ಏನು ಹೇಳೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದ ಅವರು ಹಿಂದುಳಿದವರು, ದಲಿತರು ಸೇರಿದಂತೆ ಶೂದ್ರ ಸಮುದಾಯದವರು ತಮ್ಮ ವಿರೋಧಿಗಳಾದ ಬಿಜೆಪಿ - ಆರ್.ಎಸ್.ಎಸ್ - ಎಬಿವಿಪಿ ಸೇರುತ್ತಾರಲ್ಲಾ ಇವರಿಗೆ ಏನು ಹೇಳೋದು? ಬಿಜೆಪಿ - ಆರ್.ಎಸ್.ಎಸ್ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರುತ್ತಾರಲ್ಲಾ ಇದಕ್ಕೇನು ಮಾಡೋದು?
ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ - ಆರ್.ಎಸ್.ಎಸ್ ಸೇರಿ ಇವರೇ ಮೂಲ ಆರ್.ಎಸ್.ಎಸ್ ನವರಿಗಿಂತ, ಹೆಡಗೆವಾರ್ ರೀತಿ ಮಾತಾಡ್ತಾರೆ ಎಂದರು.
ನಾನು ಹಣಕಾಸು ಮಂತ್ರಿಯಾದಾಗ, "ಈ ಸಿದ್ದರಾಮಯ್ಯಂಗೆ ನೂರು ಕುರಿ ಎಣಿಸೋಕೆ ಬರಲ್ಲ ಬಜೆಟ್ ಮಂಡಿಸ್ತಾರಾ" ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದೆ. 16 ಬಜೆಟ್ ಮಂಡಿಸಿದೆ. 17ನೇ ಬಜೆಟನ್ನೂ ಮಂಡಿಸುತ್ತೇನೆ. ನನಗೆ ಅವಕಾಶ ಸಿಕ್ಕಿದ್ದರಿಂದ ನಾನು ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು. ಅವಕಾಶ ಸಿಗದಿದ್ದರೆ ನನ್ನಿಂದ ಇದನ್ನು ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ದಮನಿತ ಜಾತಿಗಳಿಗೆ ಅವಕಾಶ ಮುಖ್ಯ ಎಂದಿದ್ದಾರೆ.